ಸಾಮಾಜಿಕ ಭದ್ರತಾ ಮಂಡಳಿ ರಚನೆಗೆ ಆಗ್ರಹಿಸಿ ಪ್ರತಿಭಟನೆ

25 smg 3
Published on

ಶಿವಮೊಗ್ಗ: ವಾಹನ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು, ಕ್ಲೀನರ್‌ಗಳು, ಟಯರ್ ಪಂಚರ್ ಹಾಕುವವರು, ಟಿಂಕರಿಂಗ್ ಮಾಡುವವರನ್ನು ಒಳಗೊಂಡ ಸಾಮಾಜಿಕ ಭದ್ರತಾ ಮಂಡಳಿಯನ್ನು ತಕ್ಷಣ ರಚಿಸುವಂತೆ ಆಗ್ರಹಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಪದಾಧಿಕಾರಿಗಳು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಮಾಜಿಕ ಭದ್ರತಾ ಮಂಡಳಿ ರಚಿಸುವಂತೆ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಮಂಡಳಿ ಅನುಷ್ಠಾನಗೊಂಡಲ್ಲಿ ರಾಜ್ಯದ 25 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಮೂಲಸೌಕರ್ಯ ನೀಡಲು ಸಾಧ್ಯವಾಗುತ್ತದೆ ಎಂದಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಮಂಡಳಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅವರು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಂಘದ ಗೌರವಾಧ್ಯಕ್ಷ, ಎಂಎಲ್‌ಸಿ ಆಯನೂರು ಮಂಜುನಾಥ್ ಅವರು ಸದನದಲ್ಲಿ ಸರ್ಕಾರದ ಗಮನ ಸೆಳೆಯಲು ಈ ವಿಷಯ ಪ್ರಸ್ತಾಪಿಸಿ ವಿಧಾನ ಪರಿಷತ್‌ನಲ್ಲಿ ದಾಖಲೀಕರಣವನ್ನೂ ಮಾಡಿದ್ದರು. ಆದರೂ ಶ್ರಮಿಕ ವರ್ಗದ ಬೇಡಿಕೆ ಈಡೇರಿಸದೇ ಇರುವುದು ನಿರಾಸೆ ಮೂಡಿಸಿದೆ ಎಂದರು.

ಸಿಎಂ ಬೊಮ್ಮಾಯಿ ಅವರು ಈ ವಿಷಯದ ಬಗ್ಗೆ ಗಮನ ಹರಿಸಿ ಕಾರ್ಮಿಕ ಸಚಿವರಿಗೆ ಸಂಪುಟದ ಮುಂದೆ ಭದ್ರತಾ ಮಂಡಳಿ ರಚನೆ ಕುರಿತ ಬಿಲ್ ತರುವಂತೆ ಒತ್ತಾಯಿಸಿದರು. ಸಂಘದ ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು, ರಾಜ್ಯಾಧ್ಯಕ್ಷ ಕೇಶವಮೂರ್ತಿ ಪೇಟ್ಕರ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಹೊನ್ನಪ್ಪ, ಕಾರ್ಯದರ್ಶಿ ರತ್ನಮಾಲಾ ಮುಳೆ, ಜಿಲ್ಲಾಧ್ಯಕ್ಷೆ ಸುರೇಖಾ ಫಾಲಾಕ್ಷಪ್ಪ, ಉಪಾಧ್ಯಕ್ಷೆ ರೂಪ ಮಾಲ್ತೇಶ್, ಪ್ರಸನ್ನಕುಮಾರ್, ವೀರಪ್ಪಯ್ಯ, ಪ್ರಧಾನ ಕಾರ್ಯದರ್ಶಿ ಇಂದಿರಾ ಬಸವನಗೌಡ, ವೀಣಾ, ರಾಜು, ಕಾರ್ತಿಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net