

ಶಿವಮೊಗ್ಗ: ಶಿವಮೊಗ್ಗ ಸಾಂಸ್ಕೃತಿಕ ರಾಜಕಾರಣಕ್ಕೆ ಹೆಸರಾಗಿದ್ದು ಯಾವುದೇ ಪಕ್ಷವಿರಲಿ ಅಭಿವೃದ್ಧಿಯಾಗುತ್ತಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಗೋಪಾಲಗೌಡ ಬಡಾವಣೆಯ ಚಂದನ ಆರೋಗ್ಯ ಪಾರ್ಕ್‌ನಲ್ಲಿ ಪಾರ್ಕ್ ಗೆಳೆಯರ ಆಶ್ರಯದಲ್ಲಿ ಭಾನುವಾರ ಚಂದನ ಕ್ರಿಕೆಟ್ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಪಾರ್ಕ್‌ನ ಗೆಳೆಯರೆಲ್ಲರೂ ಸೇರಿ ಈ ರೀತಿಯ ಆರೋಗ್ಯಕರವಾದ ಚಟುವಟಿಕೆಗಳನ್ನು ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿ ನಿವೃತ್ತರಾದವರೇ ಹೆಚ್ಚಿದ್ದಾರೆ. ಮನಸ್ಸಿನ ದುಗುಡಗಳನ್ನು ಓಡಿಸಲು ಈ ರೀತಿಯ ಕ್ರಿಯಾಶೀಲತೆ, ವ್ಯಾಯಾಮ ಬೇಕಾಗುತ್ತದೆ ಎಂದರು.
ಚುನಾವಣೆಗಳು ಬಂದು ಹೋಗುತ್ತವೆ. ಆದರೆ ರಾಜಕಾರಣಿಗಳ ಮಧ್ಯೆ ಸಾಮರಸ್ಯ ಹಾಗೇ ಇರುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ಇಲ್ಲಿ ರಾಜಕಾರಣ ಆಗುವುದಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಕಾಗೋಡು ತಿಮ್ಮಪ್ಪ ಮತ್ತು ಇತರೆ ಪಕ್ಷದ ಶಾಸಕರು ಶಿವಮೊಗ್ಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ನಮ್ಮ ನೆರೆ ಹೊರೆಯನ್ನು ನಾವು ಪ್ರೀತಿಸೋಣ. ಒಳ್ಳೆಯದನ್ನೇ ಬಯಸೋಣ. ಕ್ರೀಡಾ ಮನೋಭಾವ ಎಲ್ಲರಲ್ಲೂ ಇರಲಿ. ಪಾರ್ಕ್‌ನ್ನು ಸುಂದರವಾಗಿಟ್ಟುಕೊಳ್ಳಿ. ಶ್ರೀರಾಮ ಎಲ್ಲರಿಗೂ ಒಳ್ಳೆಯದು ಮಾಡುತ್ತಾನೆ. ಪಾರ್ಕ್ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದೀರಿ ಖಂಡಿತ ಈಡೇರಿಸುವೆ ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಹಾಗೂ ಪಾರ್ಕ್ ಗೌರವಾಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಕಳೆದ 20 ವರ್ಷಗಳಿಂದ ಚಂದನ ಪಾರ್ಕ್ ಅಭಿವೃದ್ಧಿಗಾಗಿ ನಾವೆಲ್ಲ ಶ್ರಮಿಸುತ್ತಿದ್ದೇವೆ. ಶಾಸಕ ಚನ್ನಬಸಪ್ಪ ಅವರು ಹೋರಾಟದಿಂದ ಬಂದವರೇ ಹೊರತೂ ಲಾಟರಿಯಿಂದ ಶಾಸಕರಾದವರಲ್ಲ. ಅವರಿಗೆ ಯೋಗ ಮತ್ತು ಯೋಗ್ಯತೆ ಎರಡೂ ಇದೆ. ಪಾರ್ಕ್‌ನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 75 ಲಕ್ಷ ರೂ. ಅವಶ್ಯಕತೆ ಇದೆ. ಇದಕ್ಕಾಗಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಹಲವು ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ಪಾರ್ಕ್ ಅಧ್ಯಕ್ಷ ಜಯಕುಮಾರ್ ಗೌಡ(ಜಯಣ್ಣ) ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಆಯೋಜಕರಾದ ಜಗನ್ನಾಥ್, ಶಿವಕುಮಾರ್, ಪ್ರಕಾಶ್, ಚಂದ್ರಶೇಖರ್, ಗುರುರಾಜ್, ಸುಬ್ರಹ್ಮಣ್ಯ, ಅಣ್ಣಪ್ಪ, ಪುನೀತ್, ದೇವರಾಜ್, ಎ.ಹಾಲೇಶಪ್ಪ, ನವಲಪ್ಪ, ಜಿ.ಕೆಂಚಪ್ಪ, ಜಿ.ನಾಗಪ್ಪ ಇತರರಿದ್ದರು.