ಸಿಎಂಗೆ 24ರಂದು ಜ್ಞಾಪನಾಪತ್ರ: ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

basava jaya mrutyunjaya swamiji
Published on

ಶಿವಮೊಗ್ಗ: ಮಲೆಗೌಡ ಮತ್ತು ಲಿಂಗಾಯತ ಪಂಚಮಸಾಲಿ ಎರಡೂ ಒಂದೇ ಆಗಿದ್ದು 2ಎ ಮೀಸಲಾತಿ ಕಲ್ಪಿಸಬೇಕಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಭರವಸೆ ನೀಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಮೂರು ಬಾರಿ ನೀಡಿದ್ದ ಭರವಸೆಯೂ ಹುಸಿಯಾಗಿದೆ. ಹಾಗಾಗಿ ಆ.24ರಂದು ಸಿಎಂಗೆ ಜ್ಞಾಪನಾಪತ್ರ ನೀಡಲು ನಿರ್ಧರಿಸಲಾಗಿದೆ ಎಂದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಎರಡು ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದು, ಬೇಡಿಕೆ ಈಡೇರಿಕೆಗೆ ನಿರಂತರ ಹೋರಾಟ ಮಾಡಲಾಗುತ್ತಿದೆ. ಆ.16ರಿಂದ 24ರವರೆಗೆ ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಪ್ರತಿಜ್ಞಾ ಪಂಚಾಯತ್ ಮತ್ತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂ.22ರಂದು ಸಭೆ ಕರೆದಿದ್ದ ಸಿಎಂ ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀಕ್ಷೆ ನಡೆಸುತ್ತಿದ್ದು ವರದಿ ಬಂದ ತಕ್ಷಣ ಮೀಸಲಾತಿ ಕಲ್ಪಿಸುವ ಭರವಸೆ ಇದೆ. ಅಲ್ಲಿವರೆಗೆ ಹೋರಾಟ ನಿಲ್ಲಿಸುವ ಬದಲು ಅಭಿಯಾನದ ಮೂಲಕ ಮುಂದುವರಿಸಿದ್ದೇವೆ. ಈಗಾಗಲೇ ಹಾವೇರಿ, ಧಾರವಾಡ ಸೇರಿ ಹಲವೆಡೆ ತಾಲೂಕುಮಟ್ಟದಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು ಇದೀಗ ಶಿವಮೊಗ್ಗದಲ್ಲೂ ಅಭಿಯಾನ ಕೈಗೊಳ್ಳಲಾಗಿದೆ.

ಅಂದು ಬೆಳಗ್ಗೆ 10ಕ್ಕೆ ಶಿವಪ್ಪ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‌್ಯಾಲಿ ನಡೆಸಲಾಗುವುದು. ಯಡಿಯೂರಪ್ಪ ಅವರು ಲಭ್ಯ ಇಲ್ಲವಾದರೆ ಅವರ ಪುತ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಜ್ಞಾಪನಪತ್ರ ನೀಡಲಾಗುವುದು. ಒಂದು ವೇಳೆ ಇಬ್ಬರೂ ಸಿಗದಿದ್ದರೇ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಜ್ಞಾಪನಪತ್ರ ಕಳುಹಿಸಲಾಗುವುದು ಎಂದು ಹೇಳಿದರು.

ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಡಾ. ಮಾಲತೇಶ್, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸರಳಾ ಕರಿಬಸಪ್ಪ, ಶಿಕಾರಿಪುರ ತಾಲೂಕು ಅಧ್ಯಕ್ಷ ಮಹಾರುದ್ರಪ್ಪ, ಅರವಿಂದ್ ಸಾಮನಳ್ಳಿ ಮತ್ತು ಉಮೇಶ್ ಸಾಮನಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net