

ಶಿವಮೊಗ್ಗ: ಸ್ಮಾರ್ಟ್‌ಸಿಟಿ ನಿರ್ಮಿಸಿರುವ 108 ತಂಗುದಾಣಗಳಲ್ಲಿ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಗಿ ನಗರದ ರಕ್ಷಣಾ ವ್ಯವಸ್ಥೆಗೆ ಸವಾಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ನಗರದಾದ್ಯಂತ ನಿರ್ಮಿಸಿರುವ ತಂಗುದಾಣಗಳು ಅವೈಜ್ಞಾನಿಕವಾಗಿವೆ. ಮಾಹಿತಿ ಬೋರ್ಡ್‌ಗಳು ಅಪಾಯಕಾರಿಯಾಗಿ ಜೋಡಣೆಯಾಗಿವೆ. ತುಂಬಾ ಕಡಿಮೆ ಎತ್ತರದಲ್ಲಿ ಬೋರ್ಡ್ ಅಳವಡಿಸಿರುವುದರಿಂದ ಪ್ರಯಾಣಿಕರ ತಲೆಗೆ ತಾಗುತ್ತಿದ್ದು, ಸುಗಮ ಓಡಾಟಕ್ಕೆ ತೊಂದರೆಯಾಗಿದೆ. ಅನೇಕರಿಗೆ ಪೆಟ್ಟು ಬಿದ್ದು ಗಾಯಗಳಾಗಿದ್ದು, ಕೂಡಲೇ ಈ ಮಾಹಿತಿ ಬೋರ್ಡ್‌ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಬಿ.ಎಚ್.ರಸ್ತೆ, ಸಾಗರ ರಸ್ತೆ, ವಿನೋಬನಗರ 100 ಅಡಿ ರಸ್ತೆ ಮುಂತಾದ ಕಡೆಗಳಲ್ಲಿ ತಂಗುದಾಣಗಳಲ್ಲಿ ಪ್ರಯಾಣಿಕರ ಮಾಹಿತಿ ಬೋರ್ಡ್‌ಗಳನ್ನು ಬಹುತೇಕ ಕಡೆ ಪ್ರಯಾಣಿಕರು ತಂಗುದಾಣಗಳಿಗೆ ಹತ್ತುವ ಮತ್ತು ಇಳಿಯುವ ಜಾಗದಲ್ಲೇ ಅಳವಡಿಸಲಾಗಿದೆ. ವೃದ್ಧರು, ಅಂಗವಿಕಲರು ತಂಗುದಾಣ ಪ್ರವೇಶಿಸುವುದು ಅಸಾಧ್ಯವಾಗಿದೆ. ಲಕ್ಷ್ಮೀಟಾಕೀಸ್, ಮೀನಾಕ್ಷಿ ಭವನ, ಸೈನ್ಸ್ ಮೈದಾನ, ಎಪಿಎಂಸಿ ಎದುರು ಅವೈಜ್ಞಾನಿಕವಾಗಿವೆ ಎಂದು ದೂರಿದರು.
ಬಸ್‌ಗಳ ಓಡಾಟವೇ ಇಲ್ಲದ ಕೆಲವು ರಸ್ತೆಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಈ ಎಲ್ಲ ವಿಷಯವನ್ನು ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತಂದು ಸ್ಮಾರ್ಟ್‌ಸಿಟಿ ನಿರ್ಮಾಣದ ಈ ಎಲ್ಲ ತಂಗುದಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಕೆ.ವಿ.ವಸಂತಕುಮಾರ್, ಸತೀಶ್‌ಕುಮಾರ್ ಶೆಟ್ಟಿ, ಸುಬ್ಬಣ್ಣ, ಸೀತಾರಾಂ, ಚನ್ನವೀರಪ್ಪ ಗಾಮನಗಟ್ಟಿ, ವೆಂಕಟನಾರಾಯಣ್ ಮತ್ತಿತರರಿದ್ದರು.