ರೇಡಿಯೋ ತರಂಗದಿಂದ ಕೈದಿಗಳ ಅಂತರಂಗ ಪರಿವರ್ತನೆ

18 smg 9
Published on

ಶಿವಮೊಗ್ಗ: ರೇಡಿಯೋ ತರಂಗಗಳಿಂದ ಕೈದಿಗಳ ಅಂತರಂಗದ ಪರಿವರ್ತನೆ ಸಾಧ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದ ಆಶ್ರಯದಲ್ಲಿ ಆಂತರಿಕ ರೇಡಿಯೋ ಕೇಂದ್ರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಬಾನುಲಿ ಜನಪ್ರಿಯತೆ ಕಳೆದುಕೊಳ್ಳುವತ್ತ ಸಾಗಿದ್ದಾಗ ಎಫ್‌ಎಂ ಕ್ರಾಂತಿಯು ಬಾನುಲಿಗೆ ಮರುಜೀವನ ನೀಡಿತು. ಹಾಗೆಯೇ ಆಂತರಿಕ ರೇಡಿಯೋ ಕೇಂದ್ರ ಕೈದಿಗಳಲ್ಲಿ ಪರಿವರ್ತನೆ ತರುವ ಮೂಲಕ ನವಜೀವನಕ್ಕೆ ನಾಂದಿ ಹಾಡಲಿ ಎಂದರು.

ಎಫ್‌ಎಂ ಬಾನುಲಿಯ ವೈವಿಧ್ಯಮಯ ಭಾಷೆ, ಧ್ವನಿ ಮೂಲಕ ಮನಪರಿವರ್ತನೆ ಮತ್ತು ವ್ಯಕ್ತಿತ್ವದ ಸುಧಾರಣೆಗೆ ಪೂರಕವಾಗಿದೆ. ಮನರಂಜನಾ ಕಾರ್ಯಕ್ರಮಗಳ ಪ್ರಸಾರವನ್ನೂ ಮಾಡಲಿದ್ದು ಕೈದಿಗಳ ಬಾಳಿನಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಮಾತನಾಡಿ, ಕೈದಿಗಳ ಅಂತರಾಳದ ಭಾವಾಭಿವ್ಯಕ್ತಿ ಮತ್ತು ಮನಪರಿವರ್ತನೆಯ ಸದುದ್ದೇಶದಿಂದ ಆಂತರಿಕ ರೇಡಿಯೋ ಕೇಂದ್ರ ಸ್ಥಾಪನೆಯ ಕನಸು ನನಸಾಗಿದೆ. ಕೈದಿಗಳು ಇದರ ಸದುಪಯೋಗ ಪಡೆದು ಉತ್ತಮ ಬದುಕಿನತ್ತ ಹೆಜ್ಜೆ ಇರಿಸಬೇಕು ಎಂದರು.

ಪೊಲೀಸ್ ಮಹಾನಿರೀಕ್ಷಕ ಜಿನೇಂದ್ರ ಎಸ್.ಕನಗಾವಿ, ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್, ಎಎಸ್ಪಿ ಅನಿಲ್‌ಕುಮಾರ್ ಎಸ್.ಭೂಮರೆಡ್ಡಿ, ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಆರ್.ಶಿವಾಪೂರ, ಜೈಲರ್‌ಗಳಾದ ಜಿ.ಎಂ.ಮಹೇಶ್, ಎಸ್.ಎಸ್.ಅನಿಲ್‌ಕುಮಾರ್, ಶಿಕ್ಷಕರಾದ ಗೋಪಾಲಕೃಷ್ಣ, ಎಸ್.ಎನ್.ಲೀಲಾ, ರೇಡಿಯೋ ಜಾಕಿ ಅಂಕಿತಾ ಗೋಖಲೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net