ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ ನಕಲಿ: ಎಸ್ಪಿ

AIRPORT ADD
Published on

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶಗಳಿವೆ ಎಂದು ನಂಬಿ ಅಪ್ಲೈ ಮಾಡಿದರೆ ಹುಷಾರ್.. ಮೋಸ ಹೋಗುತ್ತೀರಿ..

ಹೌದು, ವಿಮಾನ ನಿಲ್ದಾಣದಲ್ಲಿ ಕೆಲವೇ ಹುದ್ದೆಗಳು ಖಾಲಿ ಇವೆ ಎಂಬ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಬಗ್ಗೆ ಮೋಸ ಹೋಗದಂತೆ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.

ಫೆ.27ರಂದು ಉದ್ಘಾಟನೆಗೆ ವಿಮಾನ ನಿಲ್ದಾಣ ಸಜ್ಜಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶಗಳು ಸಿಗಬಹುದೆಂದು ಸ್ಥಳೀಯರೂ ಆಸೆ ಹೊಂದಿದ್ದಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲವರು ವಿಮಾನ ನಿಲ್ದಾಣದಲ್ಲಿ ಉದ್ಯೋಗ ಅವಕಾಶವಿದ್ದು ಶೀಘ್ರವೇ ಸಂದರ್ಶನ ನಡೆಯಲಿದೆ. 40 ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಯಾವುದೇ ಪದವಿ ಮತ್ತು ಡಿಪ್ಲೋಮಾ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದೆ.

ಈ ಬಗ್ಗೆ ಎಚ್ಚರಿಸಿರುವ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಉದ್ಯೋಗ ಅವಕಾಶದ ಪೋಸ್ಟ್ ನಕಲಿಯಾಗಿದೆ. ಶೀಘ್ರದಲ್ಲಿ ಇದರ ಹಿಂದಿರುವ ಜಾಲವನ್ನು ಪತ್ತೆ ಹಚ್ಚಲಾಗುವುದು. ಇಂತಹ ಪೋಸ್ಟ್ ನಂಬದಂತೆ ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net