ಸಮ್ಮರ್‌ಹಿಲ್‌ನಲ್ಲಿ ಒಂದೇ ಕುಟುಂಬದ ಏಳು ಜನರು ನಾಪತ್ತೆ; ದೇವಸ್ಥಾನ ತಲುಪಿದವರಿಗೆ ಆಚೆ ಬರುವ ಅವಕಾಶವೂ ಸಿಗಲಿಲ್ಲ!

shiva temple
Published on

ಶಿಮ್ಲಾ: ಸೋಮವಾರ ಬೆಳಗ್ಗೆ ರಾಜಧಾನಿ ಶಿಮ್ಲಾದ ಸಮ್ಮರ್‌ಹಿಲ್‌ನಲ್ಲಿ ಭೂಕುಸಿತದಿಂದಾಗಿ ಶಿವಮಂದಿರ ಅವಶೇಷಗಳ ಅಡಿಯಲ್ಲಿ ಹೂತುಹೋಗಿದೆ. ಸೋಮವಾರ ಎಂಟು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಮಂಗಳವಾರ ಮತ್ತೆ ಎನ್‌ಡಿಆರ್‌ಎಫ್ ತಂಡ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಂಗಳವಾರ ಬೆಳಗ್ಗೆ ಮತ್ತೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇದುವರೆಗೆ 11 ಮಂದಿಯ ಮೃತದೇಹಗಳು ಪತ್ತೆಯಾಗಿವೆ.

ಸಮ್ಮರ್‌ಹಿಲ್‌ನಲ್ಲಿ ಒಂದೇ ಕುಟುಂಬದ ಏಳು ಜನರು ನಾಪತ್ತೆಯಾಗಿದ್ದಾರೆ. ತಮ್ಮ ಪ್ರೀತಿಪಾತ್ರರು ಇದುವರೆಗೂ ಕಾಣಿಸದ ಕಾರಣ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸಮ್ಮರ್‌ಹಿಲ್‌ನಲ್ಲಿ ಕನಿಷ್ಠ 20 ಜನರು ಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಶಿವ ದೇವಾಲಯಕ್ಕೆ ಬಂದಿದ್ದವರು. ಇದನ್ನು ಹೊರತುಪಡಿಸಿದರೆ ಎಷ್ಟು ಮಂದಿ ಭೂಕುಸಿತಕ್ಕೆ ಸಿಲುಕಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈ ಕುರಿತು ಸ್ಥಳೀಯ ಪಾಲಿಕೆ ಸದಸ್ಯರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಡಿಆರ್‌ಎಫ್ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಸೋಮವಾರ ಸಾವನ್ ಇದ್ದ ಕಾರಣ, ಸಮ್ಮರ್‌ಹಿಲ್‌ನ ಶಿವ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಜನರ ಓಡಾಟ ಪ್ರಾರಂಭವಾಯಿತು. ಧಾರಾಕಾರ ಮಳೆಯಿಂದಾಗಿ ಬೆಳಗ್ಗೆ 7:15ರ ಸುಮಾರಿಗೆ ಮರಗಳ ಸಹಿತ ಭಾರೀ ಅವಶೇಷಗಳು ದೇವಸ್ಥಾನದ ಮೇಲೆ ಉರುಳಿ ಬಿದ್ದಿವೆ. ಇದರಿಂದಾಗಿ ಈ ದೇವಾಲಯವು ಸಂಪೂರ್ಣವಾಗಿ ಅವಶೇಷಗಳಡಿ ಹೂತು ಹೋಗಿದೆ. ದೇವಸ್ಥಾನ ತಲುಪಿದವರಿಗೆ ತಪ್ಪಿಸಿಕೊಳ್ಳುವ ಅವಕಾಶವೂ ಸಿಗಲಿಲ್ಲ.

ಈ ವಿಷಯ ತಿಳಿದ ಸುತ್ತಮುತ್ತಲಿನವರು ತಕ್ಷಣ ಸ್ಥಳಕ್ಕಾಗಮಿಸಿದರು. ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿದವು. ಆದರೆ ರಸ್ತೆಗಳನ್ನು ಮುಚ್ಚಿದ್ದರಿಂದ ಯಂತ್ರೋಪಕರಣಗಳು ಹಲವಾರು ಗಂಟೆಗಳ ನಂತರ ಸ್ಥಳಕ್ಕೆ ತಲುಪಿದವು. ಜವಾನರು ಕೈಯಿಂದ ಅವಶೇಷಗಳನ್ನು ತೆಗೆಯುವ ಕಾರ್ಯ ಆರಂಭಿಸಿದರು.

ಸ್ಥಳಕ್ಕೆ ಆಗಮಿಸಿದ ಸಿಎಂ ಸುಖು
ಸೋಮವಾರ ರಾತ್ರಿಯವರೆಗೆ ಎಂಟು ಮೃತದೇಹಗಳು ಒಂದೊಂದಾಗಿ ಪತ್ತೆಯಾಗಿವೆ. ಇನ್ನೂ ಅನೇಕ ಜನರು ಅವಶೇಷಗಳಡಿಯಲ್ಲಿ ಹೂತುಹೋಗಿರುವ ಭಯವಿದೆ. ಇದಕ್ಕಾಗಿ ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಮತ್ತು ಹಲವಾರು ಸಚಿವರು ಮತ್ತು ಶಾಸಕರು ಕೂಡ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net