ಪಿಚ್ಚರ್‌ನ ಹಾಡಿಗೆ ಧ್ವನಿಯಾಗುವ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್

ಶಿಲ್ಪಾ ಗಣೇಶ್​
ಶಿಲ್ಪಾ ಗಣೇಶ್​
Published on

ಪ್ರಮುಖ ಮುಖ್ಯಾಂಶಗಳು

  • ಗಾಯಕಿಯಾಗಿ ಬಡ್ತಿ ಪಡೆದ ಶಿಲ್ಪಾ ಗಣೇಶ್​
  • ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಗಣೇಶ್ ಪತ್ನಿ
  • ಕನ್ನಡ, ತುಳು ಎರಡು ಭಾಷೆಯಲ್ಲಿ ಹಾಡಿದ ಶಿಲ್ಪಾ ಗಣೇಶ್​
ಬೆಂಗಳೂರು: ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ ಕನ್ನಡ- ತುಳು ಸಿನಿಮಾ ‘ಪಿಚ್ಚರ್’. ಸಂದೀಪ್ ಬೆದ್ರ ನಿರ್ದೇಶನದ ಈ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ, ಅಮೃತ ಸುದು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡವು ಕೆಲ ದಿನಗಳ ಹಿಂದೆ ‘ತಕ ತಕ ಕುಣಿಸಕ’ ಎಂಬ ಮದುವೆ ಮನೆಯ ಹಿನ್ನೆಲೆಯ ಸಾಂಗ್ ರಿಲೀಸ್ ಮಾಡಿತ್ತು. ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಬೆನ್ನೆಲ್ಲೇ, ಚಿತ್ರತಂಡವು ‘ಗೋಕುಲದ ರಾಧೆ’ ಎಂಬ ಶೀರ್ಷಿಕೆಯ ಮತ್ತೊಂದು ರೊಮ್ಯಾಂಟಿಕ್ ಗೀತೆಯನ್ನು ಬಿಡುಗಡೆ ಮಾಡಿದೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಈ ಹಾಡು ರಿಲೀಸ್ ಮಾಡಲಾಗಿದ್ದು, ನಿರ್ಮಾಪಕಿ ಶಿಲ್ಪಾ ಗಣೇಶ್ ಈ ಗೀತೆಗೆ ಸ್ವತಃ ಧ್ವನಿಯಾಗಿರುವುದು ವಿಶೇಷ. ಈ ಮೂಲಕ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಅವರು ಇದೀಗ ಗಾಯಕಿಯಾಗಿದ್ದಾರೆ. ಕನ್ನಡದಲ್ಲಿ ಅರಸು ಅಂತಾರೆ, ತುಳುವಿನಲ್ಲಿ ಕೀರ್ತನ್ ಭಂಡಾರಿ ‘ಗೋಕುಲದ ರಾಧೆ’ ರಚಿಸಿದ್ದು, ಸ್ಯಾಮುಯೆಲ್ ಅಭಿ ಸಂಗೀತ ನೀಡಿದ್ದಾರೆ. ಜಸ್ಕರಣ್ ಸಿಂಗ್ ಜತೆಗೆ ಶಿಲ್ಪಾ ಗಣೇಶ್ ಧ್ವನಿಯಾಗಿದ್ದು, ಕಾಶ್ಮೀರದಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ. ಕೌಟುಂಬಿಕ, ಹಾಸ್ಯ ಕಥಾಹಂದರದ ಈ ಚಿತ್ರದಲ್ಲಿ ನಿತ್ಯಪ್ರಕಾಶ್, ಅಮೃತ ಜತೆಗೆ ತುಳು ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಜ್ರಧೀರ್ ಜೈನ್ ಕಲಾಬಳಗದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ, ಚಂದ್ರಶೇಖರ್ ಕೆ.ಎಸ್. ಛಾಯಾಗ್ರಹಣ, ಧನಂಜಯ ಬಿ., ಶ್ರೀರಾಜು ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net