

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಇಂದು ತಮ್ಮ ಅಂತಾರಾಷ್ಟ್ರೀಯ ದೇಶೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, ವಿಡಿಯೋ ಮೂಲಕ ಕ್ರಿಕೆಟ್ ಲೋಕಕ್ಕೆ ಗುಡ್ಬೈ ತಿಳಿಸಿದರು. ಪಂಜಾಬ್ ಕಿಂಗ್ಸ್ ನಾಯಕನಾಗಿ ನೋಡುಗರ ಮನಗೆದ್ದ ಸ್ಟಾರ್ ಕ್ರಿಕೆಟಿಗ ಇದೀಗ ದಿಢೀರ್ ನಿವೃತ್ತಿ ವಿಷಯ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಭಾರೀ ಅಚ್ಚರಿ ಉಂಟಾಗಿದೆ. ರಿಟೈರ್ ಸುದ್ದಿ ತಿಳಿಯುತ್ತಿದ್ದಂತೆ ಅವರ ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಶುಭಕೋರುತ್ತಿದ್ದ ನೆಟ್ಟಿಗರಿಗೆ ಇದೀಗ ಮತ್ತೊಂದು ಬೇಸರದ ಸಂಗತಿ ಎದುರಾಗಿದೆ.
ಇದನ್ನೂ ಓದಿ: ರೋಟರಿ ಕ್ಲಬ್ದಿಂದ ಜನಮುಖಿ-ಸಮಾಜಮುಖಿ ಕಾರ್ಯ
ತನ್ನಿಂದ ದೂರವಾಗಿರುವ ಪುತ್ರನನ್ನು ನೆನೆದು ಶಿಖರ್ ಭಾವುಕರಾಗಿದ್ದಾರೆ. 3-4 ವರ್ಷಗಳ ಹಿಂದೆ ಧವನ್ ಅವರಿಂದ ವಿಚ್ಛೇದನ ಪಡೆದುಕೊಂಡ ಪತ್ನಿ ಅಯೇಷಾ ಮುಖರ್ಜಿ, ತಮ್ಮಿಬ್ಬರಿಗೆ ಜನಿಸಿದ ಮಗನನ್ನು ತಮ್ಮೊಂದಿಗೆ ಇರಿಸಿಕೊಳ್ಳುವ ಮೂಲಕ ಮಾಜಿ ಪತಿಗೆ ಮಗನ ಮುಖ ಕಾಣದಂತೆ ನೋಡಿಕೊಳ್ಳುತ್ತಿದ್ದಾರೆ. ಇಬ್ಬರ ಮಧ್ಯೆಯಿದ್ದ ದಾಂಪತ್ಯ ಜೀವನ ಮುರಿದುಬಿದ್ದ ನಂತರ ಧವನ್ ಆಗಾಗ್ಗೆ ತಮ್ಮ ಪುತ್ರನನ್ನು ಕಣ್ತುಂಬಿಕೊಳ್ಳಲು ಕಾತರ ವ್ಯಕ್ತಪಡಿಸುತ್ತಿರುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪುತ್ರನ ಫೋಟೋ ಹಾಕಿ ಭಾವನಾತ್ಮಕ ಸಂದೇಶ ಹಂಚಿಕೊಳ್ಳುತ್ತಾರೆ.
ಇದೀಗ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಪುತ್ರನ ಭವಿಷ್ಯವನ್ನು ನೆನಪಿಸಿಕೊಂಡ ಶಿಖರ್, "ಒಬ್ಬ ಉತ್ತಮ ಆಟಗಾರ ತನ್ನ ತಂಡಕ್ಕೆ ಹಾಗೂ ದೇಶಕ್ಕೆ ಒಳ್ಳೆಯ ಕೊಡುಗೆ ಮತ್ತು ಸೇವೆ ಸಲ್ಲಿಸಿದ್ದಾನೆ. ಅದೇ ರೀತಿ ನನ್ನ ಮಗ ಕೂಡ ಬೆಳೆಯಬೇಕು. ಈ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಬೇಕು, ಎಲ್ಲರಿಗೂ ಒಳಿತನ್ನೇ ಬಯಸುವಂತ ಮನುಷ್ಯನಾಗಬೇಕು. ಕರಿಯರ್ಗಿಂತಲೂ ಜೀವನದಲ್ಲಿ ಇದೇ ಬಹಳ ಮುಖ್ಯವಾದದ್ದು. ಇಲ್ಲಿ ನಾನು ಕಣ್ಣೀರಾಕಲು ಬಯಸುವುದಿಲ್ಲ" ಎಂದು ಮತ್ತೊಮ್ಮೆ ಈ ಸನ್ನಿವೇಶದಲ್ಲಿ ಪುತ್ರನೊಂದಿಗಿದ್ದ ಕ್ಷಣಗಳನ್ನು ನೆನದು ಭಾವುಕರಾಗಿದ್ದಾರೆ,(ಏಜೆನ್ಸೀಸ್).