ಪಾದರಾಯನಪುರ ಹಲ್ಲೆಕೋರರ ಸ್ಥಳಾಂತರ ವಿಚಾರ; ಸರ್ಕಾರ ನಿರ್ಧಾರಕ್ಕೆ ಗೃಹ ಸಚಿವರ ಸಮರ್ಥನೆ

Basavaraja Bommai
Published on

ಬೆಂಗಳೂರು: ಪಾದರಾಯನಪುರ ಹಲ್ಲೆಕೋರ ದುಷ್ಕರ್ವಿುಗಳನ್ನು ರಾಮನಗರದ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ ಸರ್ಕಾರದ ನಡೆಯನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರದ ಈ ಕ್ರಮ ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕೆರಳಿಸಿತ್ತು. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಎಚ್​ಡಿಕೆ, ಪಾದರಾಯನಪುರದ ದುಷ್ಕರ್ವಿುಗಳನ್ನು ರಾಮನಗರ ಜೈಲಿಗೆ ಕರೆತಂದು ಸರ್ಕಾರ ಘೊರ ತಪ್ಪು ಎಸಗಿದೆ ಎಂದು ಕಿಡಿಕಾರಿದ್ದರು.

ಶಿಫ್ಟ್ ಮಾಡಿದ್ದು ತಪ್ಪಲ್ಲ: ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಎಚ್​ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವರು, ಪಾದರಾಯನಪುರದ ದುಷ್ಕರ್ವಿು ಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿದ್ದರಲ್ಲಿ ತಪ್ಪಾಗಿಲ್ಲ. ಅದರಲ್ಲಿ ಯಾರದ್ದೂ ತಪ್ಪಿಲ್ಲ. ಕರೊನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಸಮಸ್ಯೆ ಬರುತ್ತಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರದ್ದು ಸಮಯೋಚಿತ ನಿರ್ಣಯ ಎಂದು ಹೇಳಿದರು.

ಪಾದರಾಯನಪುರ ಗಲಭೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿ ರಾಮನಗರ ಜೈಲಿನಲ್ಲಿ ಇರಿಸಲಾಗಿದ್ದ ಆರೋಪಿಗಳಲ್ಲಿ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅವರಿಂದ ಬೇರೆ ಯಾರಿಗೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಅವರಿಗೆ ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ ಎಂಬ ಎಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರು ಸಲಹೆ ಕೊಡುತ್ತಾರೆಂಬುದು ಮುಖ್ಯವಲ್ಲ. ಆವತ್ತಿನ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಿನಲ್ಲಿ ಇಡುವುದು ಅಗತ್ಯವಾಗಿತ್ತು. ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತವೆ. ಆರೋಪಿಗಳನ್ನು ಜೈಲಿನ ಬದಲು ಆಸ್ಪತ್ರೆಯಲ್ಲಿಟ್ಟಿದ್ದರೂ ಟೀಕೆ ಬರುತ್ತಿತ್ತು. ಸಮಯ, ಸಂದರ್ಭ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡು ಬಂದರೆ ಶಿಫ್ಟ್ ಮಾಡುತ್ತೇವೆ ಎಂದು ಕುಮಾರಸ್ವಾಮಿಗೆ ಮೊದಲೇ ಹೇಳಿದ್ದೆವು ಎಂದರು.

ರಾಮನಗರದ ಜೈಲು ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ಪಾದರಾಯನಪುರ ಠಾಣೆಯ ಪೊಲೀಸರನ್ನೂ ತಪಾಸಣೆ ನಡೆಸಲಾಗುತ್ತಿದೆ. ಅಗತ್ಯವಿದ್ದಲ್ಲಿ ಅವರನ್ನೂ ನಿಗಾ ಬಂಧನದಲ್ಲಿ ಇರಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಮನಗರ ಹಸಿರು ವಲಯ. ಆದ್ದರಿಂದ ಅಲ್ಲಿಗೆ ಕೈದಿಗಳನ್ನು ವರ್ಗಾಯಿಸಬೇಡಿ ಎಂದರೂ ಬೇಕೆಂದೇ ಅಲ್ಲಿಗೆ ಹಾಕಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ್ ಬೇಕಾದರೆ ಕೈದಿಗಳನ್ನು ಅವರ ಮನೆಯಲ್ಲೇ ಇಟ್ಟುಕೊಳ್ಳಲಿ, ಇಲ್ಲವೇ ಮಲ್ಲೇಶ್ವರದೊಳಗಾದರೂ ಹಾಕಿಕೊಳ್ಳಲಿ. | ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ರಾಮನಗರದ ಸಾರ್ವಜನಿಕ ಸ್ಥಳಗಳಲ್ಲಿ ಹಲ್ಲೆಕೋರರನ್ನು ಇಟ್ಟಿರಲಿಲ್ಲ. ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿಡಲಾಗಿತ್ತು. ಕಾರಾಗೃಹದಲ್ಲಿಯೇ ತಪಾಸಣೆಯನ್ನೂ ಮಾಡ ಲಾಗಿದೆ. ರಾಮನಗರದ ಜನತೆಯ ಸುರಕ್ಷತೆ ಹೊಣೆ ಸರ್ಕಾರದ ಮೇಲಿದೆ. ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. | ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net