ಕಿಗ್ಗಾದಲ್ಲಿರುವ ನಾಡಕಚೇರಿಯನ್ನು ಶೃಂಗೇರಿಗೆ ಸ್ಥಳಾಂತರಿಸಿ

nadakacheri
ಕಿಗ್ಗಾದಲ್ಲಿ ಇರುವ ನಾಡಕಚೇರಿ.
Published on

ಶೃಂಗೇರಿ: ತಾಲೂಕಿನ ಕಿಗ್ಗಾ ಹೋಬಳಿ ಗ್ರಾಮಸ್ಥರ ಅನುಕೂಲಕ್ಕಾಗಿ ಕಿಗ್ಗಾದಲ್ಲಿ ಈ ಹಿಂದೆ ನಾಡಕಚೇರಿ ಆರಂಭಿಸಲಾಗಿತ್ತು. ಆದರೆ ಪಟ್ಟಣದಿಂದ ಸುಮಾರು 25 ಕಿ.ಮೀ ದೂರವಿರುವ ಕೆರೆ ಗ್ರಾಪಂ ಹಾಗೂ 10 ಕಿ.ಮೀ. ದೂರವಿರುವ ಬೇಗಾರು ಮತ್ತು ನೆಮ್ಮಾರು ಗ್ರಾಪಂ ಜನತೆ ನಾಡಕಚೇರಿಗೆ ಬಂದು ಕೆಲಸ ಕಾರ್ಯ ಮಾಡಿಕೊಳ್ಳಲು ಹರಸಾಹಸ ಪಡಬೇಕಾಗಿದೆ.

ಶೃಂಗೇರಿ: ತಾಲೂಕಿನ ಕಿಗ್ಗಾ ಹೋಬಳಿ ಗ್ರಾಮಸ್ಥರ ಅನುಕೂಲಕ್ಕಾಗಿ ಕಿಗ್ಗಾದಲ್ಲಿ ಈ ಹಿಂದೆ ನಾಡಕಚೇರಿ ಆರಂಭಿಸಲಾಗಿತ್ತು. ಆದರೆ ಪಟ್ಟಣದಿಂದ ಸುಮಾರು 25 ಕಿ.ಮೀ ದೂರವಿರುವ ಕೆರೆ ಗ್ರಾಪಂ ಹಾಗೂ 10 ಕಿ.ಮೀ. ದೂರವಿರುವ ಬೇಗಾರು ಮತ್ತು ನೆಮ್ಮಾರು ಗ್ರಾಪಂ ಜನತೆ ನಾಡಕಚೇರಿಗೆ ಬಂದು ಕೆಲಸ ಕಾರ್ಯ ಮಾಡಿಕೊಳ್ಳಲು ಹರಸಾಹಸ ಪಡಬೇಕಾಗಿದೆ.
ನಾಡಕಚೇರಿ ಮುಂದೆ ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಬೆರಳೆಣಿಕೆಯಷ್ಟು ಜನರ ಕೆಲಸ ಮಾತ್ರ ಆಗುತ್ತ್ತಿದೆ. ಉಳಿದವರು ಮರುದಿನ ತಮ್ಮ ಪ್ರಯತ್ನ ಮುಂದುವರಿಸಬೇಕಾಗಿದೆ. ಕೆಲವರು ಇಡೀ ವಾರ ಬಂದು ನಿಂತರೂ ಪ್ರಮಾಣಪತ್ರ ಅಥವಾ ಅಗತ್ಯ ದಾಖಲೆಗಳು ಸಿಗದೆ ಪರದಾಡುವಂತಾಗಿದೆ.
ಒಂದು ಹೋಬಳಿಯ ಗ್ರಾಮಸ್ಥರ ಅನುಕೂಲಕ್ಕಾಗಿ ಈ ಹಿಂದೆ ನಾಡಕಚೇರಿ ಆರಂಭಿಸಲಾಯಿತು. ಆದರೆ ಪಟ್ಟಣದ ಇನ್ನೊಂದು ದಿಕ್ಕಿಗೆ ಇರುವ ಗ್ರಾಪಂಗಳಿಗೆ ಕಿಗ್ಗಾ ದೂರವಾಗುತ್ತಿದೆ. ಈ ಕಾರಣಕ್ಕಾಗಿ ಗ್ರಾಪಂನಲ್ಲಿ ಪ್ರತಿವರ್ಷ ನಡೆಯುವ ಗ್ರಾಪಂ ಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಸಾರ್ವಜನಿಕರು ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಅದು ಕಾರ್ಯಗತವಾಗಿಲ್ಲ. ಜಾತಿ ಪ್ರಮಾಣ ಪತ್ರ, ಪಹಣಿ, ಪಿಂಚಣಿ ಸೇರಿದಂತೆ ಹಲವು ದಾಖಲೆ ಪಡೆಯಲು ಬೇಗಾರು, ನೆಮ್ಮಾರು ಮತ್ತು ಕೆರೆ ಗ್ರಾಪಂ ವ್ಯಾಪ್ತಿಯ ನಾಗರಿಕರು ಇಲ್ಲಿಗೆ ಬರಬೇಕಾಗಿದೆ.
ದೂರದ ಮಲೆನಾಡಿನ ಕೆರೆ ಪಂಚಾಯಿತಿಯ ಕುಗ್ರಾಮಗಳಾದ ಶೀರ್ಲು, ಮುಡುಬ, ಮೀನುಗರಡಿ ಹಾಗೂ ನೆಮ್ಮಾರು ಪಂಚಾಯಿತಿಯ ಮಲ್ನಾಡು ಬುಕ್ಕಡಿಬೈಲ್ ಮತ್ತು ಬೇಗಾರು ಗ್ರಾಪಂ ವ್ಯಾಪ್ತಿಯ ಮೀಗಾ, ನೀಲಂದೂರು, ಅಸನಬಾಳು, ಕಲಿಗೆ, ಕೆ.ಮಸಿಗೆ ಇತರ ಹಳ್ಳಿಗಳಿಂದ ಜನರು ತಮ್ಮ ಕೆಲಸಗಳಿಗೆ ಈ ನಾಡಕಚೇರಿಗೆ ಹೋಗಬೇಕಾಗಿದೆ. ಹಣದ ಜತೆಗೆ ಸಮಯವೂ ವ್ಯಯವಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕೆಲವು ಕಡೆ ಹಳ್ಳಿಗಳ ಜನರು 8-10 ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ಬರಬೇಕಿದೆ. ಕೆಲವೆಡೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ವೃದ್ಧರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ನಾಡಕಚೇರಿಯನ್ನು ಪಟ್ಟಣಕ್ಕೆ ಸ್ಥಳಾಂತರಿಸಿದರೆ ಎಲ್ಲ ಗ್ರಾಪಂಗಳಿಗೂ ಕೇಂದ್ರ ಸ್ಥಾನವಾದಂತಾಗುತ್ತದೆ. ಅಲ್ಲದೆ ಸೋಮವಾರ ಸಂತೆ ನಡೆಯುವುದರಿಂದ ಜನರು ಪಟ್ಟಣಕ್ಕೆ ಆಗಮಿಸುತ್ತಾರೆ. ಆ ದಿನ ಎರಡೂ ಕೆಲಸಗಳನ್ನೂ ಮಾಡಿಕೊಳ್ಳಬಹುದು. ಮುಖ್ಯವಾಗಿ ಸರ್ವರ್, ಇಂಟರ್‌ನೆಟ್ ಸಮಸ್ಯೆ ಆಗುವುದು ಕಡಿಮೆ. ಈ ಕಾರಣಕ್ಕೆ ನಾಡಕಚೇರಿ ಪಟ್ಟಣದಲ್ಲಿದ್ದರೆ ಒಳಿತು ಎಂಬುದು ಎಲ್ಲರ ಅಭಿಪ್ರಾಯ.
ಕೂಡಲೇ ನಾಡಕಚೇರಿ ಸ್ಥಳಾಂತರಿಸಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net