ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ, ಬಂಧನ

Crime
Published on

ಕೋಲ್ಕತ: ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿ, ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಗೆ ಮಹಿಳೆಯೋರ್ವಳು ಕಪಾಳಮೋಕ್ಷ ಮಾಡಿದ್ದಷ್ಟೇ ಅಲ್ಲದೆ, ಅವನ ವಿರುದ್ಧ ದೂರು ದಾಖಲಿಸಿ ಆತನ ಬಂಧನವನ್ನು ಖಚಿತಪಡಿಸಿಕೊಂಡಿದ್ದಾಳೆ.

ಆಕೆ ಬಿಪಿಓ ಉದ್ಯೋಗಿ, ಮಂಗಳವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ ಒಬ್ಬ ವ್ಯಕ್ತಿಯು ಅವಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಮಹಿಳೆ ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.

ಮಂಗಳವಾರ ರಾತ್ರಿ 7.10 ಕ್ಕೆ ಮಹಿಳೆ ಸಹೋದ್ಯೋಗಿಯೊಂದಿಗೆ ಕಚೇರಿಯಿಂದ ಮನೆಗೆ ಮರಳುತ್ತಿದ್ದಳು. ಇಬ್ಬರೂ ಸೆಕ್ಟರ್ 5 ರ ಕಾಲೇಜ್ ಮೋರ್‌ನಲ್ಲಿದ್ದಾಗ, ಒಬ್ಬ ವ್ಯಕ್ತಿ ಅವರ ಹತ್ತಿರ ಬಂದ. ಆತ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದನಲ್ಲದೆ ಆಕೆಯ ಚೀಲವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ.

ಮಹಿಳೆ ಆರೋಪಿಯನ್ನು ಬೆನ್ನಟ್ಟಿ ಕಪಾಳಮೋಕ್ಷ ಮಾಡಿದಳು. ಪೊಲೀಸರಿಗೆ ಕರೆ ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಓಡಿಹೋದ ನಂತರ ಆಕೆ ರಸ್ತೆ ಪಕ್ಕದ ಮಾರಾಟಗಾರರ ಬಳಿ ಬಂದು ಆರೋಪಿಯ ಬಗ್ಗೆ ವಿಚಾರಿಸಿದ್ದಾಳೆ.

ಆತನ ಮುಖಚಹರೆಯನ್ನು ಅಲ್ಲಿಯ ವ್ಯಾಪಾರಸ್ಥರಿಗೆ ವಿವರಿಸಿದ ನಂತರ ಅವರು ಅವನ ಹೆಸರು ಮತ್ತು ಸ್ಥಳವನ್ನು ತಿಳಿಸಿದರು. ಆಕೆ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಘಟನೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಯನ್ನು ಬಾಬು ಹಾಲ್ಡರ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net