

ನಾಪೋಕ್ಲು: ಸಮೀಪದ ಹೊದ್ದೂರು ಗ್ರಾಮದ ಶ್ರೀ ಶಾಸ್ತ ಈಶ್ವರ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಮಹೋತ್ಸವ ಬುಧವಾರ ಸಂಪನ್ನಗೊಂಡಿತು.
ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಶಾಸ್ತ ಈಶ್ವರ ದೇವರ ಬಲಿ, ಗಣಪತಿ ಹೋಮ, ಅಲಂಕಾರ, ಪೂಜೆ, ಬೇಟೆ ಅಯ್ಯಪ್ಪ ಸನ್ನಿಧಿಯಲ್ಲಿ ಅಭಿಷೇಕ, ಪೂಜೆ, ವಿಷ್ಣುಮೂರ್ತಿ ದೈವ ನೆಲೆ, ಅಭಿಷೇಕ, ಪೂಜೆ ಜರುಗಿತು. ಮಧ್ಯಾಹ್ನ ನೆನಪು ಬಲಿ ಬಳಿಕ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು. ಸಂಜೆ ಆವೃತ ಸ್ನಾನ ಜರುಗಿತು. ವಿವಿಧ ನೃತ್ಯ ಸಂಪ್ರೊಕ್ಷಣೆಯೊಂದಿಗೆ ದೈವಿಕ ವಿಧಿ ವಿಧಾನಗಳು ಜರುಗಿದವು. ಬಳಿಕ ವಿಷ್ಣುಮೂರ್ತಿ ದೇವರ ತಾಯತ ತೆರೆ ಹಾಗೂ ಮೇಲೇರಿಗೆ ಅಗ್ನಿ ಸ್ಪರ್ಶ ನೆರವೇರಿಸಲಾಯಿತು. ಮಂಗಳವಾರ ವಿಷ್ಣುಮೂರ್ತಿ ದೈವದ ಕೊಳ ಜರುಗಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರಧಾನ ಅರ್ಚಕ ಜಯರಾಮ ತಂತ್ರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮೂರು ವರ್ಷಗಳ ಹಿಂದೆ ದೇವಾಲಯ ಜೀರ್ಣೋದ್ಧಾರಗೊಂಡು ಮರು ಪ್ರತಿಷ್ಠಾಪನೆಗೊಳ್ಳುವುದರ ಮೂಲಕ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯವಾಗಿ ರೂಪುಗೊಂಡಿದೆ. ಗ್ರಾಮದ ದೇವ ತಕ್ಕ ನೆರವಂಡ ಸಂಜಯ್ ಪೂಣಚ್ಚ, ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ದೇವಾಲಯ ಸಮಿತಿ ಸದಸ್ಯರು ಸೇರಿದಂತೆ ಭಕ್ತರು ಹಾಜರಿದ್ದರು.