ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ರಾಜ್ಯ ಕ್ರಮಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅಸಮಾಧಾನ!

siddu
Published on: 

ನವದೆಹಲಿ: ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಿ ಜಾರಿ ಮಾಡಲು ಹೊರಟಿದ್ದ ರಾಜ್ಯ ಸರ್ಕಾರದ ನಡೆ ಸಂವಿಧಾನ ವಿರೋಧ ಹಾಗೂ ವಿವೇಚನಾರಹಿತ ಕ್ರಮ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಲೋಕಸಭಾ ಸಂಸದ ಶಶಿ ತರೂರ್ ಟೀಕಿಸಿದ್ದಾರೆ. ಜೊತೆಗೆ ಮಸೂದೆಯನ್ನು ಘೋಷಿಸದ ಕ್ರಮದಿಂದ ಹಿಂದೆ ಸರಿದ ಸಿಎಂ ಸಿದ್ದರಾಮಯ್ಯ ಸರ್ಕಾರದ ಕ್ರಮದ ಕುರಿತು ಶಶಿ ತರೂರ್ ಸಂತಸ ವ್ಯಕ್ತಪಡಿಸಿದ್ದಾರೆ.

"ಸಂವಿಧಾನದ ಪ್ರಕಾರ, ದೇಶದ ಪ್ರತಿಯೊಬ್ಬ ನಾಗರಿಕನಿಗೆ ದೇಶದೊಳಗೆ ಸ್ವತಂತ್ರವಾಗಿ ಬದುಕುವ, ವೃತ್ತಿ ಕೈಗೊಳ್ಳುವ ಹಾಗೂ ಸಂಚರಿಸುವ ಮುಕ್ತ ಅವಕಾಶವನ್ನೂ ನೀಡಲಾಗಿದೆ. ಒಂದೊಮ್ಮೆ ಎಲ್ಲಾ ರಾಜ್ಯಗಳು ಇಂತಹ ಕಾನೂನು ಜಾರಿಗೆ ತರಲು ಮುಂದಾದರೆ ಅದು ಸಂವಿಧಾನ ವಿರೋಧಿಯಾಗಲಿದೆ. ಹೋಗಾಗಿ ಸಿಎಂ ಸಿದ್ದರಾಮಯ್ಯ ಬುದ್ಧಿವಂತಿಕೆಯ ನಿರ್ಧಾರವಲ್ಲ ಎಂದು ಹೇಳಿದ್ದಾರೆ.

ಹರಿಯಾಣದ ಸರ್ಕಾರವೊಂದು ಇದೇ ವಿಧೇಯಕವನ್ನು ಮಂಡಿಸಲು ಯತ್ನಿಸಿದಾಗ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು ಎಂದು ಅವರು ಹೇಳಿದರು.

ಇಂಥದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ ಹರಿಯಾಣದ ಸರ್ಕಾರದ ಮಸೂದೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ ‘ಕರ್ನಾಟಕ ಇಂಥದ್ದೊಂದು ಯತ್ನಕ್ಕೆ ಏಕೆ ಕೈ ಹಾಕಿತು ಎಂಬದು ಅರ್ಥವಾಗುತ್ತಿಲ್ಲ. ಸರ್ಕಾರ ಇಂತಹ ಕಾನೂನು ಜಾರಿಯಾದರೆ ಇಲ್ಲಿನ ವಹಿವಾಟು ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಂತಹ ರಾಜ್ಯಗಳಿಗೆ ಸ್ಥಳಾಂತರಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೈಗಾರಿಕೆ, ಕಾರ್ಖಾನೆಗಳು ಸೇರಿ ಕರ್ನಾಟಕದಲ್ಲಿ ಖಾಸಗಿ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.50 ರಿಂದ ಶೇ.75ರ ವರೆಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದ ವಿಧೇಯಕವನ್ನ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಕಂಪನಿಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದರು. ಕನ್ನಡಿಗರಿಗೆ ಭಾರತದ ಐಟಿ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಹುದ್ದೆಗೆ 50%,ಆಡಳಿತೇತರ ಹುದ್ದೆಗೆ 75% ಮೀಸಲಾತಿ ಕೊಡಬೇಕೆಂದು ಮಸೂದೆಯಲ್ಲಿ ತಿಳಿಸಲಾಗಿತ್ತು.