

Sharon raj and Greeshma : ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಗ್ರೀಷ್ಮಾಳಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಕೊನೆಯಲ್ಲಿ ಪೆನ್ನಿನ ನಿಬ್ ಮುರಿದಿದ್ದೇಕೆ ಎಂಬುದನ್ನು ನಾವೀಗ ತಿಳಿಯೋಣ.
ಅಂದಹಾಗೆ ಗಲ್ಲುಶಿಕ್ಷೆಗೆ ಒಳಗಾದ ಗ್ರೀಷ್ಮಾ ಕೇರಳದವಳು. ತಿರುವನಂತಪುರದ ಶರೋನ್ ರಾಜ್ ಮತ್ತು ಆಕೆಯ ನಡುವೆ ಕಾಲೇಜಿನಲ್ಲಿ ಓದುತ್ತಿದ್ದಾಗ ಲವ್ ಆಗಿತ್ತು. ಈ ಪರಿಸ್ಥಿತಿಯಲ್ಲಿ, ಗ್ರೀಷ್ಮಾಳ ಪೋಷಕರು ಯೋಧನೊಂದಿಗೆ ಆಕೆಯ ಮದುವೆಯನ್ನು ನಿಶ್ಚಯ ಮಾಡಿದರು. ಇತ್ತ ಲವ್ ಮಾಡುತ್ತಿದ್ದ ಗ್ರೀಷ್ಮಾ, ಶರೋನ್ ರಾಜ್ ಮದುವೆಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಆತನನ್ನು ಕೊಲ್ಲಲು ಪ್ಲಾನ್ ಮಾಡಿದಳು. ಸೆಕ್ಸ್ ಮಾಡುವ ನೆಪದಲ್ಲಿ ಶರೋನ್ ರಾಜ್ನನ್ನು ಮನೆಗೆ ಆಹ್ವಾನಿಸಿ, ಆ ಸಮಯದಲ್ಲಿ ಜ್ಯೂಸ್ನಲ್ಲಿ ವಿಷವನ್ನು ಬೆರೆಸಿ ನೀಡಿದ್ದಳು. ಅದನ್ನು ಕುಡಿದ ಶರೋನ್ ಸುಮಾರು 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೆ ಪ್ರಾಣ ಬಿಟ್ಟನು.
ಶರೋನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಗ್ರೀಷ್ಮಾ ಕರಾಳ ಮುಖವನ್ನು ಸಾಕ್ಷಿ ಸಮೇತ ಬಯಲು ಮಾಡಿದರು. ಗ್ರೀಷ್ಮಾ ಸಹ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಬಳಿಕ ಆಕೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದಳು. ಇತ್ತ ನೆಯ್ಯಟ್ಟಿಂಕರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯುತ್ತಿದ್ದಂತೆ, ನ್ಯಾಯಾಧೀಶರು ಗ್ರೀಷ್ಮಾಳನ್ನು ತಪ್ಪಿತಸ್ಥೆ ಎಂದು ಘೋಷಿಸಿ ಮರಣದಂಡನೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಈ ತೀರ್ಪು ನೀಡಿದ ನಂತರ ನ್ಯಾಯಾಧೀಶರು ತಮ್ಮ ಪೆನ್ನಿನ ನಿಬ್ ಅನ್ನು ಮುರಿದರು.
ಅಂದಹಾಗೆ ಈ ಪದ್ಧತಿಯನ್ನು ಬ್ರಿಟಿಷ್ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ವ್ಯಕ್ತಿಯ ಜೀವ ತೆಗೆದ ನಿಬ್ ಅನ್ನು ಬೇರೆ ಯಾವುದಕ್ಕೂ ಬಳಸಬಾರದು ಮತ್ತು ಅದು ನ್ಯಾಯಾಧೀಶರ ನೋವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಲಾಗುತ್ತದೆ. ಅಂದರೆ, ಸಾವಿನ ಶಿಕ್ಷೆಯನ್ನು ಬರೆಸಿದ ಪೆನ್ ಇರಬಾರದು ಎಂಬ ಸಂಕೇತ ಇದಾಗಿದೆ. ಈ ಪದ್ಧತಿಯನ್ನು ಬಹಳ ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ.
ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್ ರಾಜ್ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಆತ ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿದ್ದಾಳೆ.
ಗ್ರೀಷ್ಮಾ 2022ರ ಮಾರ್ಚ್ 4ರಂದು ಯೋಧನೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಬಳಿಕ ಶರೂನ್ ಜತೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ, ಮೇ ತಿಂಗಳಲ್ಲಿ ಶರೂನ್ ಮತ್ತೆ ಗ್ರೀಷ್ಮಾಗೆ ಹತ್ತಿರವಾಗಿದ್ದ. ಬಳಿಕ ನವೆಂಬರ್‌ನಲ್ಲಿ ಶರೋನ್ ಅವರ ಮನೆಯಲ್ಲಿ ಮತ್ತು ನಂತರ ವೆಟ್ಟುಕಾಡ್ ಚರ್ಚ್‌ನಲ್ಲಿ ಇಬ್ಬರು ವಿವಾಹವಾದರು. ಇದಾದ ಬಳಿಕ ಥ್ರಿಪ್ಪರಪುವಿನಲ್ಲಿ ರೂಮ್ ಬುಕ್ ಮಾಡಿ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದರು. ಯೋಧನ ಜತೆ ತನ್ನ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಶರೂನ್ನಿಂದ ದೂರಾಗಲು ಗ್ರೀಷ್ಮಾ ಬಯಸಿದಳು. ಲವ್ ಬ್ರೇಕಪ್ ಮಾಡಿಕೊಳ್ಳಲು ಸಾಕಷ್ಟು ಮನವೊಲಿಸಿದಳು. ಆದರೆ, ಅದಕ್ಕೆ ಆತ ಒಪ್ಪಲಿಲ್ಲ. ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ರಾಜ್ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಳು. ಆದರೂ ಆತ ಆಕೆಯನ್ನು ಬಿಡಲು ತಯಾರಿರಲಿಲ್ಲ. ತನ್ನೆಲ್ಲ ಪ್ರಯತ್ನಗಳು ವಿಫಲವಾದ್ದರಿಂದ ಅಂತಿಮವಾಗಿ ಕೊಲೆಯನ್ನು ಆಯ್ಕೆ ಮಾಡಿಕೊಂಡಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2022ರ ಅಕ್ಟೋಬರ್ 13ರಂದು ಇಬ್ಬರು 1 ಗಂಟೆ 7 ನಿಮಿಷಗಳ ಕಾಲ ಸೆಕ್ಸ್ ಬಗ್ಗೆ ಮಾತನಾಡಿದ್ದರು. ಸೆಕ್ಸ್ಗಾಗಿ ಒತ್ತಾಯ ಮಾಡುತ್ತಿದ್ದರಿಂದ ಅಕ್ಟೋಬರ್ 14ರಂದು ನಾನು ಗ್ರೀಷ್ಮಾ ಮನೆಗೆ ಹೋದೆ ಎಂದು ಶರೂನ್ ತನ್ನ ಸಂಬಂಧಿಕರ ಮುಂದೆ ಹೇಳಿಕೊಂಡಿದ್ದಾನೆ. ಆಯುರ್ವೇದಿಕ್ ಔಷಧದಲ್ಲಿ ವಿಷ ಬೆರೆಸಿ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ಆತನೊಂದಿಗೆ ನಡೆಸಿದ್ದ ಚಾಟ್ ಅನ್ನು ಗ್ರೀಷ್ಮಾ ಡಿಲೀಟ್ ಮಾಡಿದ್ದಾಳೆ. ಅಳಿಸಿದ ಸಂದೇಶಗಳನ್ನು ಹಿಂಪಡೆಯಬಹುದೇ ಎಂದು ನೋಡಲು ಅವಳು ಹಲವಾರು ಬಾರಿ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿಯೂ ಹುಡುಕಾಡಿದ್ದಾಳೆ.
ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್ನಲ್ಲಿದ್ದ ಶರೋನ್ ರಾಜ್, ನನಗೆ ವಿಷವನ್ನು ನೀಡಿ ವಂಚನೆ ಮಾಡಿದ್ದಾಳೆ ಎಂದು ಸಂಬಂಧಿಕರಿಗೆ ಹೇಳಿದ್ದಾನೆ. ಈ ಎಲ್ಲ ಅಂಶಗಳನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ದಾಖಲಿಸಿದ್ದು, ನೆಯ್ಯಟ್ಟಿಂಕರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಜನವರಿ 20ರಂದು ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಯಲ ಗ್ರೀಷ್ಮಾಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡವನ್ನು ಕೋರ್ಟ್ ವಿಧಿಸಿದೆ. ಎರಡನೇ ಆರೋಪಿಯಾಗಿರುವ ಗ್ರೀಷ್ಮಾಳ ತಾಯಿ ಸಿಂಧು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ನ್ಯಾಯಾಧೀಶ ಎ.ಎಂ. ಬಶೀರ್ ಅವರು ಈ ಮಹತ್ವದ ತೀರ್ಪುನ್ನು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ತನಿಖಾ ಅಧಿಕಾರಿಗಳನ್ನು ನ್ಯಾಯಾಲಯ ಶ್ಲಾಘಿಸಿತು. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಪೊಲೀಸರು ತನಿಖಾ ವಿಧಾನಗಳನ್ನು ಬದಲಾಯಿಸಿದ್ದಾರೆ ಎಂದು ನ್ಯಾಯಾಲಯವು ಪ್ರಶಂಸಿಸಿತು. ತಿರುವನಂತಪುರಂ ಗ್ರಾಮೀಣ ಎಸ್‌ಪಿ ಡಿ.ಶಿಲ್ಪಾ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿತು. ಎಸ್‌ಪಿ ಎಂ.ಕೆ. ಜುಲ್ಫಿಕರ್, ಡಿವೈಎಸ್‌ಪಿಗಳಾದ ಕೆ.ಜೆ. ಜಾನ್ಸನ್, ವಿ.ಟಿ. ರಸಿತ್ ಮತ್ತು ಪಾರಸಲ ಇನ್ಸ್‌ಪೆಕ್ಟರ್ ಸಾಜಿ ತನಿಖೆಯ ನೇತೃತ್ವ ವಹಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಎಸ್. ವಿನೀತ್ ಕುಮಾರ್, ಅಲ್ಫಾಸ್ ಮಥಥಿಲ್ ಮತ್ತು ನವನೀತ್ ಕುಮಾರ್ ಪ್ರಾಸಿಕ್ಯೂಷನ್ ಪರವಾಗಿ ಹಾಜರಾದರು. (ಏಜೆನ್ಸೀಸ್)