ಇಂಡಿಯನ್ ಬುಕ್ ಆಫ್ ರೆಕಾರ್ಡ್​​​​​ನಲ್ಲಿ ಸ್ಥಾನ ಪಡೆದ ವೈಎಸ್ ಶರ್ಮಿಳಾ

sharmila
Published on

ತೆಲಂಗಾಣ: ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರ ರಾಜಕೀಯ ಜೀವನವು ಯಶಸ್ಸಿನ ಕಥೆಯಾಗದಿರಬಹುದು, ಆದರೆ ಅವರು ಖಂಡಿತವಾಗಿಯೂ ಎರಡೂ ತೆಲುಗು ರಾಜ್ಯಗಳಲ್ಲಿ ಸುದೀರ್ಘ ಪಾದಯಾತ್ರೆಯನ್ನು ಕೈಗೊಳ್ಳುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ವೈಎಸ್ಆರ್​​​​ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಹೆಸರು ಇಂಡಿಯನ್ ಬುಕ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಹೌದು, ತೆಲಂಗಾಣದಲ್ಲಿ 3800 ಕಿ.ಮೀ.ನಡೆದ ಮೊದಲ ಮಹಿಳೆ ಎಂಬ ದಾಖಲೆಯನ್ನು ಶರ್ಮಿಳಾ ನಿರ್ಮಿಸಿದ್ದಾರೆ. ಇದೀಗ ಇಂಡಿಯನ್ ಬುಕ್ ಆಫ್ ರೆಕೋರ್ಸ್ ನ ಪ್ರತಿನಿಧಿಗಳು ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಈ ಪ್ರಶಸ್ತಿ ಲಭಿಸಿರುವುದಕ್ಕೆ ಶರ್ಮಿಳಾ ಸಂತಸ ವ್ಯಕ್ತಪಡಿಸಿದರು. ತನ್ನ ತಂದೆಯ ಕಾಲದಲ್ಲಿ ಇಡೀ ತೆಲಂಗಾಣ ಪ್ರದೇಶವೇ ಚಿನ್ನದ ತೆಲಂಗಾಣ ಇದ್ದಂತೆ ಎಂದರು. ಪಕ್ಷದ ಕಚೇರಿಯಲ್ಲಿ ರಾಷ್ಟ್ರಧ್ವಜ ಅನಾವರಣಗೊಳಿಸಿ ಮಾತನಾಡಿದ ಅವರು ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು.
ವೈಎಸ್ ಶರ್ಮಿಳಾ ಅಕ್ಟೋಬರ್ 2021 ರಲ್ಲಿ ತಮ್ಮ ತಂದೆ ವೈಎಸ್ ರಾಜಶೇಖರ್ ರೆಡ್ಡಿ ಪಾದಯಾತ್ರೆಯನ್ನು ಕೈಗೊಂಡಿದ್ದ ಚೆವೆಲ್ಲಾ ಕ್ಷೇತ್ರದಿಂದ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಶರ್ಮಿಳಾ ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಯಾಣಿಸಿದರು. ತನ್ನ ಪಾದಯಾತ್ರೆಯಲ್ಲಿ ಹಲವು ಬಾರಿ ಕಷ್ಟಗಳನ್ನೂ ಎದುರಿಸಿದರು.

ಪಾದಯಾತ್ರೆಯಲ್ಲೂ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದರು. ಇದರಿಂದ ಅವರ ಪಾದಯಾತ್ರೆ ಕೆಲವು ದಿನಗಳ ಕಾಲ ಮೊಟಕುಗೊಂಡಿತು. ಮತ್ತೆ ಅವರು ನ್ಯಾಯಾಲಯಕ್ಕೆ ತೆರಳಿ ಪಾದಯಾತ್ರೆಗೆ ಅನುಮತಿ ಪಡೆದಿದ್ದರು. ಅಂದಹಾಗೆ ಶರ್ಮಿಳಾ ತೆಲಂಗಾಣದಲ್ಲಿ 3800 ಕಿಲೋಮೀಟರ್ ದೂರ ಕ್ರಮಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net