

ಬೆಂಗಳೂರು: ಜನಾರ್ದನ ಚಿಕ್ಕಣ್ಣ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಪೌಡರ್’. ಇದೊಂದು ಕಾಮಿಡಿ ಜಾನರ್ ಚಿತ್ರವಾಗಿದ್ದು, ದಿಗಂತ್, ಅನಿರುದ್ಧ ಆಚಾರ್ಯ, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ , ರಂಗಾಯಣ ರಘು ತಾರಾಗಣದಲ್ಲಿದ್ದಾರೆ. ಇಂದು ಬಿಡುಗಡೆಯಾಗಲಿರುವ ಸಿನಿಮಾದ ಕುರಿತು, ನಟಿ ಶರ್ಮಿಳಾ ಮಾಂಡ್ರೆ ತಮ್ಮ ಪಾತ್ರ ಹಾಗೂ ಸಿನಿಮಾದ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ. ಪಾತ್ರದ ಕುರಿತು,‘ಈ ಸಿನಿಮಾದಲ್ಲಿ ನನ್ನದು ಮೇಕಪ್ ಮಲ್ಲಿಕಾ ಎಂಬುದು ನನ್ನ ಪಾತ್ರದ ಹೆಸರು. ಇದೊಂದು ಚಾಲೆಂಜಿಂಗ್ ಪಾತ್ರವಾಗಿದ್ದು, ಈ ಸಿನಿಮಾದಲ್ಲಿ ನಾನು ನಾಲ್ಕು ಸಾಹಸ ದೃಶ್ಯಗಳನ್ನು ಮಾಡಿದ್ದೇನೆ. ಇಡೀ ಸಿನಿ ಕರಿಯರ್‌ನಲ್ಲಿ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಇದೇ ಮೊದಲು ಎನಿಸುತ್ತದೆ. ಇನ್ನು ಸಿನಿಮಾದಲ್ಲಿ ಪ್ರತೀ ಪಾತ್ರಗಳು ಆಳವಾಗಿವೆ ಈ ಮೂಲಕ ಸಮಾಜದಲ್ಲಿ ಒಂದು ವಿಶೇಷ ಸಂದೇಶವನ್ನು ನೀಡುತ್ತಿವೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
2 ತಿಂಗಳೂ ತರಬೇತಿ: ‘ಪೌಡರ್‘ ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಇದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಈ ಬಗ್ಗೆ ‘ಮೊದಲಿಗೆ ನಿರ್ದೇಶಕ ಜನಾರ್ದನ ಚಿಕ್ಕಣ್ಣ ಅವರು ಬಂದು ತುಂಬಾ ಬೋಲ್ಡ್ ಆಗಿರುವ ಪಾತ್ರ ಇದೆ. ನೀವೇ ಮಾಡಬೇಕು ಎಂದರು. ಚಿತ್ರದಲ್ಲಿ ಕಾಮಿಡಿ ಜತೆಗೆ ಆ್ಯಕ್ಷನ್ ಸೀನ್‌ಗಳಿವೆ ಎಂದಾಗ ಸ್ವಲ್ಪ ಭಯದಲ್ಲಿಯೇ ಒಪ್ಪಿಕೊಂಡೆ. ಹಿಂದಿನ ಸಿನಿಮಾಗಳಲ್ಲಿ ಒಂದು ಆ್ಯಕ್ಷನ್ ಸೀನ್ ನಟಿಸಿದ್ದೇನಾದರೂ, ಈ ಸಿನಿಮಾ ರೀತಿ ನಾಲ್ಕೈದು ಸಾಹಸ ದೃಶ್ಯಗಳಲ್ಲಿ ಮಾಡಿರಲಿಲ್ಲ. ಇದಕ್ಕಾಗಿ ನಾನು ಎರಡು ತಿಂಗಳು ತರಬೇತಿ ಪಡೆದಿದ್ದೇನೆ. ಸದ್ಯ ಚೆನ್ನಾಗಿ ಮೂಡಿಬಂದಿದೆ ಆತ್ಮವಿಶ್ವಾಸ ಇದೆ’ ಎನ್ನುತ್ತಾರೆ ಶರ್ಮಿಳಾ.
ಕನ್ನಡ ಸಿನಿಮಾಗಳಿಗೆ ಆದ್ಯತೆ:
ಶರ್ಮಿಳಾ ಮಾಂಡ್ರೆ ಈ ಸಿನಿಮಾದ ಬಳಿಕ ಮೂರು ನಾಲ್ಕು ಕಥೆಗಳು ಅವರ ಕೈಸೇರಿವೆ ಅಂತೆ. ಆದರೆ, ಇನ್ನು ಅಂತಿಮ ನಿರ್ಧಾರ ಮಾಡಬೇಕಷ್ಟೇ. ಸದ್ಯ ಕನ್ನಡ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುವ ನಟಿಗೆ ಬೇರೆ ಭಾಷೆಗಳಿಂದ ಅವಕಾಶಗಳು ಬಂದರೆ ಖಂಡಿತವಾಗಿ ನಟಿಸಲಿದ್ದೇನೆ’ ಎನ್ನುತ್ತಾರೆ.