

ಪಟನಾ: ಜೆಎನ್ಯು ಮಾಜಿ ವಿದ್ಯಾರ್ಥಿ ಮತ್ತು ಸಿಎಎ ವಿರುದ್ಧ ದೆಹಲಿಯ ಶಾಹೀನ್ ಬಾಘ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪ್ರಮುಖ ಸಂಘಟನಾಕಾರರಲ್ಲಿ ಒಬ್ಬನಾದ ಶಾರ್ಜಿಲ್ ಇಮಾಮ್ನನ್ನು ದೇಶದ್ರೋಹ ಪ್ರಕರಣದಡಿಯಲ್ಲಿ ಬಿಹಾರದ ಜಿಹಾನ್ಬಾದ್ನಲ್ಲಿ ಮಂಗಳವಾರ ಬಂಧಿಸಲಾಗಿದೆ.
ಸಿಎಎ ಕಾರಣದಿಂದಾಗಿ ಭಾರತದಿಂದ ಅಸ್ಸಾಂ ಪ್ರತ್ಯೇಕವಾಗಲಿದೆ ಎಂದು ಇಮಾಮ್ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಮಾಮ್ ವಿರುದ್ಧ ದೇಶದ ಇತರೆ ಐದು ರಾಜ್ಯಗಳಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಕಳೆದ 4-5 ದಿನಗಳಿಂದ ತಲೆಮರೆಸಿಕೊಂಡಿದ್ದ ಇಮಾಮ್ನನ್ನು ದೆಹಲಿ ಪೊಲೀಸರು ಇಂದು ಬಿಹಾರದಲ್ಲಿ ಬಂಧಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಇಮಾಮ್ ಸಹೋದರನನ್ನು ಕೂಡ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಶಾಹೀನ್ ಬಾಘ್ ಪ್ರತಿಭಟನೆಯನ್ನು ಸಂಘಟಿಸಿರುವುದರಲ್ಲಿ ಇಮಾಮ್ ಭಾಗಿಯಾಗಿದ್ದ. ಆದರೆ ಆತನ ವಿಡಿಯೋ ವೈರಲ್ ಆದ ಬಳಿಕ ಆತ ಮುನ್ನೆಲೆಗೆ ಬಂದಿದ್ದ. ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಂದು ಪೊಲೀಸರು ಆರೋಪಿಸಿ, ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೆ, ಇದಕ್ಕೂ ಮುಂಚೆ ದೆಹಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್ನಲ್ಲೂ ಪ್ರಚೋದನಾಕಾರಿ ಭಾಷಣ ಮಾಡಿದ್ದ, ಆತನ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)