ಮಹಾರಾಷ್ಟ್ರ ಬಂದ್​​ಗೆ ಹೈಕೋರ್ಟ್​ ತಡೆ; ಈ ಬಗ್ಗೆ ಶರದ್​ ಪವಾರ್​ ಹೇಳಿದಿಷ್ಟು..

Untitled-design-2024-08-23T182800.292
Published on

ಮುಂಬೈ: ಹೈಕೋರ್ಟ್​​ ಆದೇಶದ ಹಿನ್ನೆಲೆ ಮಹಾ ವಿಕಾಸ್ ಅಘಾಡಿ(ಎಂವಿಎ) ಕರೆ ನೀಡಿದ್ದ ಮಹಾರಾಷ್ಟ್ರ ಬಂದ್​​​ ಅನ್ನು ಹಿಂಪಡೆಯುವಂತೆ ​ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್​ ಶುಕ್ರವಾರ(ಆಗಸ್ಟ್​​ 23) ಮನವಿ ಮಾಡಿದ್ದಾರೆ.

ಮಹಾರಾಷ್ಟ್ರ ಬಂದ್​​ ವಿಚಾರದಲ್ಲಿ ಹೈಕೋರ್ಟ್​ ಮಧ್ಯಪ್ರವೇಶಿಸಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು ಬಂದ್‌ಗೆ ಕರೆ ನೀಡದಂತೆ ಶುಕ್ರವಾರ ಆದೇಶ ಹೊರಡಿಸಿದೆ. ಎರಡು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿದ್ದ ಪೀಠವು, ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಗಳು ಬಂದ್‌ಗೆ ಬೆಂಬಲ ನೀಡದಂತೆ ಅಥವಾ ಭಾಗವಹಿಸದಂತೆ ನಿರ್ಬಂಧಿಸುತ್ತಿರುವುದಾಗಿ ಹೇಳಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಬಂದ್​ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪವಾರ್​, ಬಂದ್​ ಅನ್ನು ಹೈಕೋರ್ಟ್​ ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ಸಮಯದ ಕೊರತೆ ಇರುವುದರಿಂದ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ನ್ಯಾಯಾಂಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಬಂದ್ ಕರೆಯನ್ನು ಹಿಂಪಡೆಯಬೇಕು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಬಂದ್ ಕರೆಯನ್ನು ಹಿಂಪಡೆದಿದ್ದು, ಪಕ್ಷದ ಕಾರ್ಯಕರ್ತರು ರಾಜ್ಯದ್ಯಂತ ಶನಿವಾರ(ಆಗಸ್ಟ್​ 24) ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. ಕಾಂಗ್ರೆಸ್, ಶಿವಸೇನೆ (UBT) ಮತ್ತು NCP ಮೂರು ಪಕ್ಷಗಳ ನಾಯಕರು ಸಭೆ ಸೇರಿ ಬದ್ಲಾಪುರ ಶಾಲೆಯಲ್ಲಿನ ಅಪಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net