17ಕ್ಕೆ ಶಾಂತವೀರೇಶ್ವರ ಸೇವಾ ಸಮಿತಿ ರಜತೋತ್ಸವ

mahalingayya
Published on

ಶಿವಮೊಗ್ಗ: ಗುರು ಶಾಂತವೀರೇಶ್ವರ ಸೇವಾ ಸಮಿತಿಯ ರಜತ ಮಹೋತ್ಸವದ ಅಂಗವಾಗಿ ಆ.17ರ ಸಂಜೆ 5ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಮಹಾಲಿಂಗಯ್ಯ ಶಾಸ್ತ್ರಿ ತಿಳಿಸಿದರು.

ವೀರಶೈವ ಲಿಂಗಾಯತ ವಧು-ವರರ ಅನ್ವೇಷಣಾ ಕೇಂದ್ರ ಸ್ಥಾಪನೆಯಾಗಿ 25 ವರ್ಷಗಳಾಗಿವೆ. ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ವಧು-ವರರ ಅನ್ವೇಷಣಾ ಕೇಂದ್ರದ ನೂತನ ವೆಬ್‌ಸೈಟ್, ಯಾತ್ರಾ ಕೈಪಿಡಿ ಬಿಡುಗಡೆ, ಪ್ರತಿಭಾ ಪುರಸ್ಕಾರ ಮತ್ತು ಬೆಕ್ಕಿನ ಕಲ್ಮಠದೊಂದಿಗೆ ಶ್ರಾವಣ ಚಿಂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಬಿ.ವೈ.ರಾಘವೇಂದ್ರ ರಜತ ಸಂಭ್ರಮ ಕೈಪಿಡಿ ಬಿಡುಗಡೆ ಮಾಡುವರು ಎಂದರು.

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ಎಲ್ಲ ಸಮಾಜದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿದ್ಯಾರ್ಥಿಗಳು ಆ.14ರ ಸಂಜೆ 5ರೊಳಗೆ ನಮ್ಮ ಕಚೇರಿಗೆ ದೃಢೀಕೃತ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ತಲುಪಿಸಬೇಕು ಎಂದು ತಿಳಿಸಿದರು.

ರಜತ ಸಂಭ್ರಮದ ಪ್ರಯುಕ್ತ 17ರ ಮಧ್ಯಾಹ್ನ 3ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮುರುಘಾಮಠದ ಮುಖ್ಯ ವೈದ್ಯಾಧಿಕಾರಿ ವೈ.ಬಿ.ಪ್ರಭುದೇವ್ ತಿಳಿಸಿದರು. ಈ ಶಿಬಿರದಲ್ಲಿ ಬೆನ್ನು, ಭುಜ, ಮಂಡಿನೋವು ತಪಾಸಣೆ ಮಾಡಲಾಗುವುದು. ಇದಕ್ಕೆ ಅವಶ್ಯವಿರುವ ಆಯುರ್ವೇದ ಚಿಕಿತ್ಸೆ ಬಗ್ಗೆ ಸಲಹೆ ನೀಡಲಾಗುವುದು ಎಂದರು.

ಪ್ರಮುಖರಾದ ಇ.ವಿಶ್ವಾಸ್, ಹನುಮೇಗೌಡ, ಕಾಂತರಾಜ್, ಶಾಂತವೀರಯ್ಯ, ಚನ್ನಬಸಪ್ಪ, ಲೋಕೇಶ್, ಕರಿಬಸಪ್ಪ, ವೀರಭದ್ರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net