

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಡಾ.ಶಾಂತ್ ಎ.ತಿಮ್ಮಯ್ಯಗೆ ನಿಗದಿಯಂತೆ ನ.14ರವರೆಗೆ ಅಧಿಕಾರದಲ್ಲಿ ಮುಂದುವರೆಯಲು ಹೈಕೋರ್ಟ್ ಅನುಮತಿ ಸೂಚಿಸಿದೆ.
ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಮೇ 31ರಂದು ಹೊರಡಿಸಿದ್ದ ಅಧಿಸೂಚನೆ ರದ್ದುಗೊಳಿಸಬೇಕು ಹಾಗೂ ಕೆಎಸ್‌ಪಿಸಿಬಿ ಅಧ್ಯಕ್ಷ ಮತ್ತು ತಾಂತ್ರಿಕ ಸದಸ್ಯರಾಗಿ ಮುಂದುವರೆಯಲು ಅನುಮತಿ ನೀಡಬೇಕು ಎಂದು ಕೋರಿ ಶಾಂತ್ ತಿಮ್ಮಯ್ಯ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ ಕೆಎಸ್‌ಪಿಸಿಬಿ ಸದಸ್ಯತ್ವದಿಂದ ಶಾಂತ್ ತಿಮ್ಮಯ್ಯ ಅವರನ್ನು ಅನರ್ಹಗೊಳಿಸಲಾಗಿದ್ದು, ಅಧ್ಯಕ್ಷ ಹುದ್ದೆಯಿಂದ ವಜಾ ಮಾಡಿರುವುದು ಸ್ವಾಭಾವಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಆರೋಪ ನಿಗದಿ ಮಾಡದೇ ಮತ್ತು ಅವರ ವಾದ ಆಲಿಸದೇ, ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಪೀಠ ಹೇಳಿದೆ
ಮುಂದುವರಿದು, ಅರ್ಜಿದಾರರ ಅವಧಿಯು ನ.11ರಂದು ಕೊನೆಗೊಳ್ಳಲಿದೆ. ಒಂದು ತಿಂಗಳು 10 ದಿನಗಳು ಮಾತ್ರ ಬಾಕಿ ಇರುವುದರಿಂದ ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಲಾಗಿಲ್ಲ. 2021ರ ನ.11ರ ಅಧಿಸೂಚನೆ ಪ್ರಕಾರ ಅವರು ಕೆಎಸ್‌ಪಿಸಿಬಿ ಸದಸ್ಯ ಮತ್ತು ಅಧ್ಯಕ್ಷರಾಗಿರಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.