

ಶಿವಮೊಗ್ಗ: ಜಿಲ್ಲಾಡಳಿತ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಮೇ 2ರ ಬೆಳಗ್ಗೆ 11ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆದಿಗುರು ಶಂಕರಾಚಾರ್ಯರ ಜಯಂತಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜಯಂತಿ ಉದ್ಘಾಟಿಸಲಿದ್ದು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ಜಿ.ಎಸ್.ನಟೇಶ್ ಅವರು ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ ಮಾತನಾಡಿ, ಶಿವಮೊಗ್ಗದ 30ಕ್ಕೂ ಹೆಚ್ಚು ಭಜನಾ ಮಂಡಳಿಗಳ ಸದಸ್ಯೆಯರು ಶಂಕರಾಚಾರ್ಯ ವಿರಚಿತ ಕೃತಿಗಳನ್ನು ಪಠಣ ಮಾಡಲಿದ್ದಾರೆ ಎಂದು ಹೇಳಿದರು.
ಶಿವಮೊಗ್ಗದ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಡಾ. ಪಿ.ನಾರಾಯಣ ಮಾತನಾಡಿ, ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ಶಂಕರ ಮಠದಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ ರುದ್ರಾಭಿಷೇಕ ಮತ್ತು ಶ್ರೀ ಶಂಕರ ವಿಜಯ ಪಾರಾಯಣ ನಡೆಯುತ್ತಿದ್ದು, ಮೇ 2ರವರೆಗೆ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮೇ 2ರ ಸಂಜೆ 6.30ರಿಂದ ನಾದಪ್ರಿಯ ಶಂಕರ ಗೋಷ್ಠಿ ಗಾಯನ ನಡೆಯಲಿದೆ. ಶಿವಮೊಗ್ಗದ 500ಕ್ಕೂ ಹೆಚ್ಚು ಭಜನಾ ಮಂಡಳಿಗಳ ಮಾತೆಯರಿಂದ ಶಂಕರಾಚಾರ್ಯರ ಪರಂಪರಾ ಸ್ತೋತ್ರಗಳ ಸಮರ್ಪಣೆ ನಡೆಯಲಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಎಕೆಬಿಎಂಎಸ್ ಜಿಲ್ಲಾ ಪ್ರತಿನಿಧಿ ಎನ್.ಎಂ.ರಘುರಾಮ್, ಪ್ರಮುಖರಾದ ಕೆ.ವೆಂಕಟೇಶ್ ರಾವ್, ಶಂಕರನಾರಾಯಣ ಹೊಳ್ಳ, ಹೊಸಹಳ್ಳಿ ಕೇಶವಮೂರ್ತಿ, ಸರಳಾ ಹೆಗಡೆ, ಸುನಿತಾ ಶ್ರೀಧರ್, ಬಿ.ಕೆ.ವೆಂಕಟೇಶ್‌ಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.