

ಶಿವು ಹುಣಸೂರು
ಈ ದೇವಾಲಯದಲ್ಲಿ ಪವಾಡಗಳೇನೂ ನಡೆಯುವುದಿಲ್ಲ.. ಯಾರ ಮೇಲೂ ದೈವದ ಆವಾಹನೆಯೂ ಆಗುವುದಿಲ್ಲ.. ಶನೈಶ್ಚರನ ಮೇಲೆ ಅಚಲ ನಂಬಿಕೆಯಿದ್ದಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿಸಿತು ಅಂದುಕೊಳ್ಳಿರಿ…
ಹುಣಸೂರು ನಗರದ ಹುಣಸೂರು-ಕೆ.ಆರ್.ನಗರ ಮುಖ್ಯರಸ್ತೆಯ ಕಲ್ಕುಣಿಕೆ ಗ್ರಾಮದ ಬಳಿಯಿರುವ ಶ್ರೀ ಶನೇಶ್ಚರಸ್ವಾಮಿ, ಗಣಪತಿ ಮತ್ತು ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯದ ಮಹಿಮೆ ಅಂತಹದು. ಶನೈಶ್ಚರನ ಪಾದಕ್ಕೆ ಎರಗಿದರೆ ಕೈಹಿಡಿಯದೆ ಬಿಡನು ಎನ್ನುವುದು ಭಕ್ತರ ನಂಬಿಕೆ. ಎಳ್ಳು ಎಣ್ಣೆಯ ದೀಪ ಬೆಳೆಗಿದಲ್ಲಿ, ಎಳ್ಳಿನ ಪ್ರಸಾದ ನೀಡಿದಲ್ಲಿ ಆತ ಒಲಿಯುತ್ತಾನೆ. ಶಕ್ತಿದೇವತೆ ದುರ್ಗೆ, ವಿಘ್ನ ನಿವಾರಕ ಗಣಪತಿಯೂ ಇರುವುದು ಭಕ್ತರ ಭಕ್ತಿಯ ಪರಾಕಾಷ್ಟೆಗೆ ಮೂಲಕೇಂದ್ರವಾಗಿ ವಿಜೃಂಬಿಸುತ್ತಿದೆ.
ತಳ್ಳುವ ಗಾಡಿಯಲ್ಲಿದ್ದ ಶನೇಶ್ಚರ ನೆಲದಲ್ಲಿ ತಳವೂರಿದ ಪರಿ: ಮೂರು ದಶಕಗಳ ಹಿಂದೆ ಕಲ್ಕುಣಿಕೆ ಸೇರಿದಂತೆ ಇಡೀ ಹುಣಸೂರು ತಾಲೂಕಿನಾದ್ಯಂತ ದಾಸಯ್ಯ ದಂಪತಿ ತಳ್ಳುವ ಗಾಡಿಯಲ್ಲಿ ಶನೇಶ್ವರ ಸ್ವಾಮಿಯ ಫೋಟೋವನ್ನಿಟ್ಟುಕೊಂಡು ಊರೂರು ಸುತ್ತಿ ಭಕ್ತರು ನೀಡಿದ ಕಾಣಿಕೆಯಿಂದ ಜೀವನ ನಡೆಸುತ್ತಿದ್ದರು. ರಾತ್ರಿಯಾದರೆ ಈಗ ದೇವಾಲಯವಿರುವ ಸ್ಥಳದ ಮುಂಭಾಗದಲ್ಲಿ ಜೋಪಡಿಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಸರ್ಕಾರಿ ಸೇವೆಯಲ್ಲಿರುವ ಬಸಪ್ಪ ಎನ್ನುವ ಶನೇಶ್ವರ ಭಕ್ತರು ದಾಸಯ್ಯ ದಂಪತಿಗೆ ಹಣ ನೀಡಿ ದೇವರಿಗೆ ಕೈ ಮುಗಿದು ಹೋಗುತ್ತಿದ್ದರು. ದಿನಕಳೆದಂತೆ ದಾಸಯ್ಯ ದಂಪತಿ ಬಸಪ್ಪರಲ್ಲಿ ದೇವರಿಗೆ ಗುಡಿ ಕಟ್ಟಿಸಬೇಕು ಹೆಚ್ಚಿನ ಹಣ ಅಗತ್ಯವಿದೆ ಎಂದು ಅವಲತ್ತುಕೊಳ್ಳುತ್ತಿದ್ದರು. 1998ರಲ್ಲಿ ಬಸಪ್ಪ ತಮ್ಮ ಆಪ್ತರೊಡಗೂಡಿ ಚಿಕ್ಕದಾದ ಗುಡಿ ಕಟ್ಟಿಸಿಕೊಟ್ಟರು. ಈ ಗುಡಿಗೆ ಸಾಕಷ್ಟು ಭಕ್ತರು ಬಂದು ಪೂಜೆ ಸಲ್ಲಿಸಲು ಆರಂಭಿಸಿದರು. 2009ರಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ರಸ್ತೆಬದಿಯಲ್ಲಿದ್ದ ಎಲ್ಲ ಗುಡಿಗೋಪುರ, ಚರ್ಚ್, ಮಸೀದಿಗಳ ತೆರವಿಗೆ ಆದೇಶಿಸಿದ್ದರಿಂದ ಶನೇಶ್ವರನ ಈ ಗುಡಿಯೂ ನೆಲಸಮವಾಯಿತು. ಇದರಿಂದ ದಾಸಯ್ಯ ದಂಪತಿ ದಿಕ್ಕುತೋಚದಂತಾದರೆ, ಬಸಪ್ಪರಿಗೆ ಶನೇಶ್ಚರನನ್ನು ಇಲ್ಲೇ ಉಳಿಸಿಕೊಳ್ಳಬೇಕೆಂಬ ಉದ್ದೇಶ ಮತ್ತಷ್ಟು ಬಲಗೊಳ್ಳತೊಡಗಿತು.
ಸಮಾನಮನಸ್ಕ ಸ್ನೇಹಿತರ ಬಳಗದೊಂದಿಗೆ ದೇವಾಲಯ ಸಮಿತಿಯೊಂದನ್ನು ರಚಿಸಿಕೊಂಡು ಹಾಲಿ ದೇವಾಲಯವಿರುವ ಜಾಗವನ್ನು ರೈತರಿಂದ ಖರೀದಿಸಿದರು. ನಂತರ ನಡೆದದ್ದೆಲ್ಲವೂ ಪವಾಡವೇ ಸರಿ. ಬಸಪ್ಪ ಸರ್ಕಾರಿ ಸೇವೆಯ ನಡುವೆಯೇ ದೇವಾಲಯದ ಅಭಿವೃದ್ಧಿಗೆ ಪಣತೊಟ್ಟು ನಿಂತರು. ಶನೇಶ್ಚರಸ್ವಾಮಿಗೆ ದೇಗುಲವಾಯಿತು. 2012ರಲ್ಲಿ ದೇವಾಲಯದ ಮರುನಿರ್ಮಾಣ ಕಾರ್ಯ ಆರಂಭಗೊಂಡು 2014ರಲ್ಲಿ ಸಂಪನ್ನಗೊಂಡಿತು. ಶನೇಶ್ಚರಸ್ವಾಮಿಯ ಮೂಲವಿಗ್ರಹ ಸ್ಥಾಪನೆ ಸೇರಿದಂತೆ ನೂರಾರು ಭಕ್ತರ ಸಹಕಾರದಿಂದ ಶ್ರೀ ಶನೇಶ್ಚರಸ್ವಾಮಿ ದೇವಾಲಯ ವೈಶಿಷ್ಟೃಪೂರ್ಣವಾಗಿ ಬೆಳೆದು ನಿಂತಿದೆ.
ಪವಾಡವಿಲ್ಲ..ನಂಬಿದವರ ಕೈ ಬಿಡೋಲ್ಲ: ಶನೇಶ್ವರಸ್ವಾಮಿ ದೇವಾಲಯದ ಜಾಗದಲ್ಲಿ ಕೆಲ ದೋಷಗಳಿವೆ ಎಂದು ಅರ್ಚಕವೃಂದ ತಿಳಿಸಿದಾಗ ಪರಿಹಾರಾರ್ಥವಾಗಿ ಶನೇಶ್ವರಸ್ವಾಮಿ ದರ್ಶನಕ್ಕೂ ಮುನ್ನ ಈಶ್ವರನ ದರ್ಶನವಾಗುವ ಅವಕಾಶವನ್ನು ಭಕ್ತರಿಗೆ ನೀಡಿದಲ್ಲಿ ದೋಷಪರಿಹಾರ ಸಾಧ್ಯವೆಂದು ತಿಳಿದುಬಂದಿತು. ಅದರಂತೆ ದೇವಾಲಯದ ಮುಂಭಾಗದಲ್ಲಿ ಒಂದು ಕಡೆ ಕಿರಾತೇಶ್ವರನ ಗುಡಿ ಮತ್ತೊಂದು ಕಡೆ ನವಗ್ರಹ ಮತ್ತು ಸೂರ್ಯದೇವನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಪ್ರಾಂಗಣದಲ್ಲಿ ನಾಗದೇವರನ್ನು ಸ್ಥಾಪಿಸಲಾಗಿದೆ. ಈ ಎಲ್ಲ ದೇವರ ಸಂಗಮಸ್ಥಳವಾಗಿ ಶ್ರೀ ಶನೇಶ್ಚರಸ್ವಾಮಿ ದೇಗುಲ ಎಲ್ಲೆಡೆ ಮನೆಮಾತಾಗಿ ಭಕ್ತಗಣ ಸಾಗಿಬರುತ್ತಿದೆ.
ತನ್ನ ಕಷ್ಟಕಾರ್ಪಣ್ಯಗಳನ್ನು ನಿವಾರಿಸು ಎಂದು ಶನೇಶ್ಚರನಲ್ಲಿ ಬೇಡಿಕೊಳ್ಳುವ ಭಕ್ತ ಇಷ್ಟಾರ್ಥ ನೆರವೇರಿದ ನಂತರ ತಾನೇ ಬಂದು ದೇವರ ಸೇವೆಯನ್ನು ಅನ್ನದಾನ, ವಿಶೇಷ ಪೂಜೆ, ಪ್ರಸಾದ ವಿನಿಯೋಗದಂತಹ ಕಾರ್ಯಗಳ ಮೂಲಕ ತೊಡಗಿಸಿಕೊಳ್ಳುತ್ತಾರೆ. ಸಂತಾನಫಲ, ಲಗ್ನ, ಭೂವಿವಾದ, ಆರೋಗ್ಯ ಸೇರಿದಂತೆ ಬಾಳಿನಲ್ಲಿ ಎದುರಾಗಿರುವ ಹಲವು ತೊಂದರೆಗಳನ್ನು ಶನೇಶ್ಚರಸ್ವಾಮಿ ನಿವಾರಿಸಿದ್ದಾರೆ ಎನ್ನುವುದು ಭಕ್ತರ ಒಕ್ಕೊರಲ ಅಭಿಪ್ರಾಯ.
ವರ್ಷವಿಡೀ ಸಂಭ್ರಮ: ದೇವಾಲಯದಲ್ಲಿ ಶನೇಶ್ಚರಸ್ವಾಮಿಗೆ ಪ್ರತಿ ಶನಿವಾರ ವಿಶೇಷಪೂಜೆಯೊಂದಿಗೆ ಬೆಳಗ್ಗೆ ವಿಶೇಷ ಅನ್ನದಾನ ವಿನಿಯೋಗ ನಡೆಯುತ್ತದೆ. ಒಂದು ಕಪ್ ಎಳ್ಳು ಎಣ್ಣೆಗೆ ಒಂದು ರೂಪಾಯಿ ನಾಣ್ಯಹಾಕಿ ದೇವರ ಮುಂದೆ ನಿಂತು ಭಕ್ತಿಯಿಂದ ಪ್ರಾರ್ಥಿಸಿ ದೇವರ ಮುಂಭಾಗವಿರುವ ದೀಪಕ್ಕೆ ಹಾಕುವುದು ಇಲ್ಲಿನ ಸಂಪ್ರದಾಯ. ಹೀಗೆ ಮಾಡಿದಲ್ಲಿ ದೇವರು ತಮ್ಮ ಬೇಡಿಕೆ ಈಡೇರಿಸುತ್ತಾನೆ ಎನ್ನುವುದು ಭಕ್ತರ ನಂಬಿಕೆ.
ನಂತರ ಇದೇ ದೀಪದಲ್ಲಿರುವ ಎಣ್ಣೆಯನ್ನು ಭಕ್ತರು ತೆಗೆದುಕೊಂಡು ಹೋಗಿ ಮನೆಯಲ್ಲಿ ಹಿರಿಯರು ಯಾರಿಗಾದರೂ ಕಾಲು, ಕೈ ನೋವಿನಿಂದ ಬಳಲುತ್ತಿದ್ದರೆ ಎಣ್ಣೆ ಹೆಚ್ಚಿದಲ್ಲಿ ನೋವು ವಾಸಿಯಾಗುತ್ತದೆ. ಪ್ರತಿ ಅಮಾವಾಸ್ಯೆಗೆ ಶನೇಶ್ಚರನಿಗೆ ಬೆಳಗಿನ ಜಾವ ಎಣ್ಣೆ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಶನಿವಾರದಂದು ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆದು ಅನ್ನಸಂತರ್ಪಣೆ ನಡೆಯುತ್ತದೆ. ವಿಘ್ನನಿವಾರಕ ಗಣಪತಿಗೆ ಗಣೇಶಚತುರ್ಥಿಯ ಸಂಭ್ರಮದೊಂದಿಗೆ ಪ್ರತಿ ಸಂಕಷ್ಟಿಯಂದು ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯುತ್ತದೆ. ತಾಯಿ ದುರ್ಗೆಯ ಸಂಭ್ರಮವನ್ನು ನವರಾತ್ರಿಯ ಸಂದರ್ಭದಲ್ಲಿ ಕಾಣಬೇಕು. 9 ದಿನಗಳ ಕಾಲ 9 ರೂಪದಲ್ಲಿ ದೇವಿ ಕಂಗೊಳಿಸುತ್ತಾಳೆ. ಅರ್ಚಕ ಮಹೇಶ್‌ಭಟ್ ನೇತೃತ್ವದಲ್ಲಿ ತಾಯಿಯ ಅಲಂಕಾರ ಮತ್ತು ವಿಶೇಷ ಪೂಜೆಗಳು ಭಕ್ತರನ್ನು ಭಕ್ತಿಯ ಪರಾಕಾಷ್ಠೆಯಲ್ಲಿ ಮೆರೆಸುತ್ತದೆ. ಸೇವೆ ನೀಡುವ ಭಕ್ತರು ಮಹೇಶ್‌ಭಟ್ಟರ ಮಾರ್ಗದರ್ಶನದಡಿ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಮಾಡಿಸಿ ಕೃತಾರ್ಥತೆ ಅನುಭವಿಸುತ್ತಿದ್ದಾರೆ. ದೇವಾಲಯದಲ್ಲಿರುವ ಕಾಣಿಕೆ ಹುಂಡಿಯಲ್ಲಿ ಭಕ್ತರು ತಮ್ಮಇಷ್ಟಾರ್ಥ ಸಿದ್ಧಿಗಾಗಿ ಚೀಟಿ ಬರೆದು ಇಷ್ಟಾರ್ಥ ನೆರವೇರಿದ ನಂತರ ಸೇವೆ ನೀಡುವುದನ್ನೂ ಬರೆದು ಹಾಕಿರುತ್ತಾರೆ.
ಶಿವರಾತ್ರಿಯ ವೇಳೆ ಕಿರಾತೇಶ್ವರನಿಗಾಗಿ ವಿಶೇಷ ಪೂಜೆ, ಜಾಗರಣೆ, ದೇವಾಲಯದ ಆವರಣದಲ್ಲಿ ಪೌರಾಣಿಕ ನಾಟಕ ಪ್ರದರ್ಶನ, ಭಕ್ತಿಗೀತೆಗಳ ಗಾಯನ ಆಯೋಜಿಸಲಾಗುತ್ತದೆ. ಈಶ್ವರಿಗೆ ರುದ್ರಾಭಿಷೇಕ ಬಹುವಿಶೇಷವಾಗಿ ನಡೆಸಲಾಗುತ್ತದೆ. ನವಗ್ರಹ ಪೂಜೆ, ನಾಗಮಂಟದಲ್ಲಿರುವ ನಾಗದೇವರುಗಳಿಗೆ ಸೇವೆ ಹೀಗೆ ಒಂದಿಲ್ಲೊಂದು ವಿಶೇಷತೆಗಳು ವರ್ಷವಿಡೀ ಇಡೀ ದೇವಾಲಯದ ಆವರಣದಲ್ಲಿ ನಡೆಯುತ್ತಲೇ ಇರುತ್ತದೆ. ನಾಗದೋಷವಿರುವವರು ಇಲ್ಲಿ ಬಂದು ಪೂಜೆ ಸಲ್ಲಿಸಿ ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ದೇವಾಲಯದ ಮುಂಭಾಗ ಜಾನುವಾರುಗಳಿಗಾಗಿ ನೀರಿನ ತೊಟ್ಟಿಯನ್ನು ನಿರ್ಮಿಸಿ ಸದಾ ನೀರು ಇರುವಂತೆ ಕ್ರಮವಹಿಸಲಾಗಿದೆ. ರೈತರು ತಮ್ಮ ಕೃಷಿಕಾರ್ಯಕ್ಕೆ ಜಾನುವಾರುಗಳನ್ನು ಕರೆದುಕೊಂಡು ಹೋಗುವ ವೇಳೆ ಇಲ್ಲೇ ನೀರುಣಿಸುತ್ತಾರೆ.
ಅಕ್ಷಯಪಾತ್ರೆ: ದೇವಾಲಯದಲ್ಲಿ ಅಕ್ಷಯಪಾತ್ರೆಯೊಂದನ್ನು ಇಟ್ಟಿದ್ದಾರೆ. ಇದರಲ್ಲಿ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ನಂತರ ತಮ್ಮ ಶಕ್ತಿಯನುಸಾರ ದೇವರ ಸೇವೆಗೆ ದವಸಧಾನ್ಯ ನೀಡಬಹುದು. ಎಳ್ಳು, ಬೆಲ್ಲ, ಎಳ್ಳೆಣ್ಣೆ, ಅಕ್ಕಿ, ಉಪ್ಪು ಹೀಗೆ ಹಾಕುತ್ತಾರೆ. ಅದನ್ನು ಆಡಳಿತ ಮಂಡಳಿ ವತಿಯಿಂದ ಪ್ರತಿದಿನದ ಅನ್ನದಾನ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ.
ಪ್ರತಿವರ್ಷ ಮಾರ್ಚ್ ತಿಂಗಳ ಎರಡನೇ ಶನಿವಾರ ದೇವಾಲಯದ ವಾರ್ಷಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಅಂದು ಆಯೋಜನೆಗೊಳ್ಳುವ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಪ್ರಸಾದ ಸ್ವೀಕರಿಸುತ್ತಾರೆ.