

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಿರ್ಧಾರದ ಬೆನ್ನಲ್ಲೇ, ಬಾಲಿವುಡ್ ಮಂದಿ ತಾವು ಅನುಭವಿಸಿದ ನರಕಯಾತನೆಯನ್ನು ಎಳೆ ಎಳೆಯಾಗಿ ಹಂಚಿಕೊಳ್ಳುತ್ತಿದ್ದಾರೆ. ಅನುಭವಿಸಿದ ಯಾತನೆ ಬಗ್ಗೆ ಮುಕ್ತವಾಗಿ ಮಾತನಾಡುವುದೇ ಒಳ್ಳೆಯದು ಎಂಬ ಲೆಕ್ಕಕ್ಕೆ ಬಂದಿದ್ದಾರೆ. ಹೌದು, ಖಿನ್ನತೆ ಎದುರಿಸಿ ಬಂದವರ ಕಥೆ ಇದು. ಬಾಲಿವುಡ್ನ ನೀಳ ಕಾಯದ ಚೆಲುವೆ, ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಖಿನ್ನತೆ ಬಗೆಗಿನ ತಮಗಾದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾವಿನ ನಿರ್ಧಾರ ಒಳ್ಳೆಯದಲ್ಲ ಎಂಬ ಕಿವಿಮಾತನ್ನೂ ಹೇಳಿದ್ದಾರೆ.
‘ಖಿನ್ನತೆ ಯಾರಿಗಾದರೂ ಬರಬಹುದು. ಹಾಗೆ ಬಂದರೆ ಮೊದಲು ಅದನ್ನು ಗುರುತಿಸಿ.. ಅದನ್ನು ಒಪ್ಪಿಕೊಳ್ಳಿ.. ಬಳಿಕ ಅದರ ನಿವಾರಣೆಗೆ ಕ್ರಮಗಳನ್ನು ತೆಗೆದುಕೊಳ್ಳಿ. ಹಾಗೇ ಬಿಟ್ಟರೆ ಅದು ನಿಮ್ಮನ್ನು ಕತ್ತಲ ಕೋಣೆಗೆ ನೂಕುತ್ತದೆ. ಅಲ್ಲಿ ಭರವಸೆ ಮತ್ತು ಸಂತೋಷ ಎಂಬುದು ಇರುವುದಿಲ್ಲ. ಕ್ಷಣ ಕ್ಷಣ ನಿಮ್ಮನ್ನು ಅಧಿರರನ್ನಾಗಿಸುತ್ತದೆ. ಆ ಕತ್ತಲ ಪ್ರಪಂಚದಲ್ಲಿ ನಿಮಗೆ ನೀವೇ ವೈರಿಯಾಗುತ್ತೀರಿ. ಅದೇ ನಿಮ್ಮ ರಿಯಾಲಿಟಿಯಾಗುತ್ತದೆ. ನಾವು ಜೀವಿಸುತ್ತಿರುವ ಈ ಪ್ರಪಂಚಕ್ಕೆ ನಮ್ಮ ಪಯಣ ಗೊತ್ತಿಲ್ಲ. ಕಣ್ಣ ಮುಂದೆಯೇ ನಿಮ್ಮ ಗುರಿ ಮತ್ತು ನಿರೀಕ್ಷೆಗಳ ಆಳಕ್ಕೆ ಬೀಳುತ್ತವೆ. ಪ್ರಸ್ತುತತೆಯನ್ನು ಮತ್ತಷ್ಟು ಕತ್ತಲು ಮಾಡುತ್ತವೆ. ಏನೇ ಹೇಳಿದರೂ, ಇದು ನಿನ್ನ ಪಯಣ.. ನೀನೇ ಎದುರಿಸಬೇಕು.. ಇಲ್ಲಿ ನೀನು ಒಬ್ಬಂಟಿ.. ’ ಹೀಗೆ ತಾವು ಅನುಭವಿಸಿದ ಖಿನ್ನತೆಯನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ ಶಮಿತಾ.
ಅದಕ್ಕೆ ಪರಿಹಾರವನ್ನು ಹೇಳಿಕೊಂಡಿದ್ದಾರೆ. ‘ಖಿನ್ನತೆಯ ಬಗ್ಗೆ ನನಗೆ ಗೊತ್ತು. ಅದನ್ನು ನಾನು ಅನುಭವಿಸಿದ್ದೇನೆ. ಸಾವಿನ ಬಾಗಿಲ ಬಳಿ ಹೋಗಿ ಬಂದಿದ್ದೇನೆ. ಅದನ್ನು ಗಮನಿಸಿ, ಒಪ್ಪಿಕೊಳ್ಳಲು ನನಗೆ ಕೊಂಚ ಸಮಯ ಹಿಡಿಯಿತು. ಅದರಿಂದ ಹೊರಬರಲು, ನನಗೆ ನಾನೇ ಗಟ್ಟಿಯಾಗುತ್ತ ಹೋದೆ. ನಾನು ನಿನಗಿಂತ ಬಲಿಷ್ಠ, ನಿನ್ನನ್ನು ಸೋಲಿಸಬಲ್ಲೇ ಎಂದು ಸಾಬೀತುಪಡಿಸಿದೆ. ಇದೆಲ್ಲವನ್ನು ಯಾಕೆ ಬರೆಯುತ್ತಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ಜಗತ್ತು ಬದಲಾಗುತ್ತಿದೆ. ನಮ್ಮ ನಡುವೆಯೇ ಬದಲಾವಣೆಗಳಾಗುತ್ತವೆ’ ಹೀಗೆ ಸುದೀರ್ಘವಾದ ಪತ್ರವೊಂದನ್ನೇ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. (ಏಜೆನ್ಸೀಸ್)