ಅಂದು ಅವಮಾನ ಇಂದು ಸನ್ಮಾನ

g t mall
Published on

ಬೆಂಗಳೂರು: ಪಂಚೆ ಧರಿಸಿದ್ದ ಕಾರಣಕ್ಕೆ ರೈತ ಕೀರಪ್ಪನನ್ನು ಮಾಲ್ ಒಳಗೆ ಬಿಡದೇ ಅವಮಾನ ಮಾಡಿದ್ದ ಜಿ.ಟಿ ಮಾಲ್‌ನವರು ಕ್ಷಮೆ ಕೋರಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ಗೆ ಸಿನಿಮಾ ವೀಕ್ಷಣೆಗೆ ಬಂದಿದ್ದ ಫಕೀರಪ್ಪ ಎಂಬ ರೈತ ಪಂಚೆ ಧರಿಸಿದ್ದರು ಎಂಬ ಕಾರಣಕ್ಕೆ ಮಾಲ್ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಇದಕ್ಕೆ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿ.ಟಿ ಮಾಲ್‌ನವರು ಕೊನೆಗೂ ಕ್ಷಮೆ ಕೋರಿದ್ದಾರೆ. ಜತೆಗೆ ಕೀರಪ್ಪ ಅವರಿಗೆ ಅವಮಾನವಾದ ಜಾಗದಲ್ಲಿಯೇ ಸನ್ಮಾನ ಮಾಡಲಾಗಿದೆ.
ಅವಮಾನ ಮಾಡಿದ್ದ ಮಾಲ್ನವರು ರೈತ ಫಕೀರಪ್ಪಗೆ ಶಾಲು ಹಾಕಿ ಸನ್ಮಾನಿದ್ದಾರೆ. ಜತೆಗೆ ಮಾಲ್ ಇನ್‌ಚಾರ್ಜ್ ಸುರೇಶ್ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.

ಮಾಲ್ ಮುಂದೆ ಪ್ರತಿಭಟನೆ:
ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ಹಲವು ಕಾರ್ಯಕರ್ತರು ರೈತರ ಉಡುಪಿನಲ್ಲಿ ಮಾಲ್ ಮುಂದೆ ಜಮಾಯಿಸಿದರು. ರೂಪೇಶ್ ರಾಜಣ್ಣ ನೇತೃತ್ವದ ತಂಡ ಪಂಚೆ ಧರಿಸಿ ಮಾಲ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಮಾಲ್‌ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಈ ವೇಳೆ ಮಾಲ್ ಇನ್‌ಚಾರ್ಜ್ ಸುರೇಶ್ ಕ್ಷಮೆ ಕೇಳಿದರೂ ಹೋರಾಟಗಾರರು ಜಗ್ಗಲಿಲ್ಲ. ಸ್ಥಳಕ್ಕೆ ಮ್ಯಾನೇಜರ್ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಸದ್ಯ ಈಗ ಮಾಲ್ ಸಿಬ್ಬಂದಿ ತಾವು ಮಾಡಿದ ಎಡವಟ್ಟನ್ನು ಸರಿ ಮಾಡಿಕೊಂಡಿದ್ದು ಪಂಚೆಯಲ್ಲೇ ಬಂದ ರೈತ ಫಕೀರಪ್ಪನಿಗೆ ಮಾಲ್ ಒಳಗೆ ಸನ್ಮಾನ ಮಾಡಿ ಕ್ಷಮೆ ಕೇಳಿದ್ದಾರೆ.

ಇದೊಂದು ಬ್ರಿಟಿಷರ ಮನಸ್ಥಿತಿ:
ಈ ಘಟನೆ ಸಂಬಂಧ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿ, ಮುಖ ನೋಡಿ, ಬಟ್ಟೆ ನೋಡಿ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಇದೊಂದು ಬ್ರಿಟಿಷರ ಮನಸ್ಥಿತಿ, ನಮ್ಮನ್ನು ಆಳಿದವರ ಮೈಂಡ್‌ಸೆಟ್. ಜಿ.ಟಿ.ಮಾಲ್ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಅರಿವಿನ ಕೊರತೆ ಇದೆಯೋ, ದುರಹಂಕಾರದಿಂದ ಮಾಡುತ್ತಿದ್ದಾರೋ? ಜಿ.ಟಿ.ಮಾಲ್ನವರು ಹಾಗೇ ನಡೆದುಕೊಂಡಿದ್ದು ತಪ್ಪು, ಖಂಡನೀಯ. ಮುಖ ನೋಡಿ ಗೌರವ ಕೊಡುವುದು ಖಂಡನೀಯ ಎಂದರು. ಈ ಬಗ್ಗೆ ಪೊಲೀಸ್ ನೋಟಿಸ್ ನೀಡುವ ಸೂಚನೆಯನ್ನು ಕಾರ್ಮಿಕ ಸಚಿವರು ನೀಡಿದ್ದಾರೆ. ಮತ್ತೊಂದೆಡೆ ಮಾಲ್ ಆಡಳಿತದ ವರ್ತನೆಯ ಬಗ್ಗೆ ಸ್ಪಷ್ಟನೆ ಕೇಳಿ ನೋಟೀಸ್ ನೀಡಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.

ಗರಂ ಆದ ಕಾರ್ಮಿಕ ಸಚಿವರು:
ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿ, ಪಂಚೆ ಧರಿಸಿಕೊಂಡೇ ಏಳು ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ರಾಜ್ಯದ ಆಡಳಿತ ಮಾಡುತ್ತಿದ್ದಾರೆ. ಇದರಿಂದ ಮಾಲ್‌ನವರು ಪಾಠ ಕಲಿಯಬೇಕು ಎಂದು ಟೀಕಿಸಿದ್ದಾರೆ. ಆ ಮಾಲ್ ನಡೆಸುತ್ತಿರುವವರಿಗೆ ಬುದ್ಧಿ ಕಡಿಮೆ ಇರಬೇಕು. ಕಾರ್ಮಿಕ ಇಲಾಖೆ ಅಥವಾ ಪೊಲೀಸ್ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ವಿವರಣೆ ಕೇಳುತ್ತೇವೆ ಎಂದು ಅವರು ಹೇಳಿದ್ದಾರೆ.

ಸರ್ಕಾರದಿಂದ ನಿಯಮ ತರುತ್ತೇವೆ: ಚಲುವರಾಯ ಸ್ವಾಮಿ
ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿ, ನಾವು ಈ ಘಟನೆಯನ್ನು ಖಂಡಿಸುತ್ತೇವೆ. ಈ ವಿಚಾರದಲ್ಲಿ ಸೂಕ್ತ ನಿಯಮ ರೂಪಿಸಲು ಸರ್ಕಾರ ಪ್ರಯತ್ನಿಸಲಿದೆ. ಕೆಲ ವರ್ಷಗಳ ಹಿಂದೆ ಪಂಚೆ ಕಟ್ಟಿಕೊಂಡು ಹೋದರೆ ಕ್ಲಬ್‌ಗಳಲ್ಲಿ ಬಿಡುತ್ತಿರಲಿಲ್ಲ. ಶೂ ಇಲ್ಲದೇ ಪಂಚೆ ಹಾಕಿಕೊಂಡು ಕ್ಲಬ್‌ಗೆ ಹೋಗಬಹುದು ಅಂತ ನಮ್ಮ ಸರ್ಕಾರ ನಿರ್ಧಾರ ಮಾಡಿತ್ತು. ಇದನ್ನು ನಾವು ಅಂದು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೆವು. ಈಗಲೂ ಇದಕ್ಕೆ ಸರ್ಕಾರ ನಿಯಮ ತರಬೇಕು ಎಂದು ಹೇಳಿದ್ದಾರೆ.

ನಡೆದುದ್ದೇನು?
ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ಗೆ ಮಂಗಳವಾರ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿತ್ತು. ಅದರಲ್ಲಿ ಫಕೀರಪ್ಪ ಎಂಬ ವೃದ್ಧರೊಬ್ಬರು ಪಂಚೆ ಧರಿಸಿ ಬಂದಿದ್ದರು. ಪಂಚೆ ಧರಿಸಿದ್ದಾರೆ ಎಂಬ ಏಕಮಾತ್ರ ಕಾರಣಕ್ಕೆ ಜಿ.ಟಿ.ಮಾಲ್ನ ಭದ್ರತಾ ಸಿಬ್ಬಂದಿ ಪ್ರವೇಶಕ್ಕೆ ನಿರಾಕರಣೆ ಮಾಡಿದ್ದರು. ವೃದ್ಧನನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿದ್ದರು. ಇದರಿಂದ ತೀವ್ರ ಅವಮಾನಕ್ಕೊಳಗಾದ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್ನವರಿಗೆ ಒಳಗೆ ಬಿಡುವಂತೆ ಪರಿ ಪರಿಯಾಗಿ ಮನವಿ ಮಾಡಿದ್ದಾರೆ. ಆದರೆ ಮಾಲ್ನವರು ಮಾತ್ರ ಒಳಗಡೆ ಬಿಡಲಿಲ್ಲ. ಮಾಲ್ ಪ್ರವೇಶವನ್ನು ನೀರಾಕರಣೆ ಮಾಡುವುದನ್ನು ನಾಗರಾಜ್ ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಯಿತು. ಒತ್ತಡಕ್ಕೆ ಮಣಿದ ಮಾಲ್‌ನವರು ಕ್ಷಮೆಯಾಚಿಸಿ ಫಕೀರಪ್ಪರನ್ನು ಸನ್ಮಾನ ಮಾಡಿ ಗೌರವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net