

ಬೆಳಗಾವಿ: ಅಭಿವೃದ್ಧಿಗಿಂತ, ಭಾಷಾ ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡವನ್ನು ಅವಮಾನಿಸುವ ಕೆಲಸ ಮುಂದುವರಿದಿದೆ. ನಮಗೆ ಕನ್ನಡ ಗೊತ್ತಿಲ್ಲ ಹಾಗಾಗಿ ಉರ್ದು, ಮರಾಠಿಯಲ್ಲಿ ದಾಖಲೆಗಳನ್ನು ಕೊಡಿ ಎಂಇಎಸ್ ಸದಸ್ಯರು ಒತ್ತಾಯಿಸುತ್ತಿರುವುದು ಕನ್ನಡಿಗರನ್ನು ಕೆರಳಿಸಿದೆ.
ನಗರದ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಸದಸ್ಯರು ನಮಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ. ಪಾಲಿಕೆ ಸಭೆಯ ನಡಾವಳಿಗಳು, ನೋಟಿಸ್ಗಳು, ಅಜೆಂಡಾಗಳು ಸೇರಿ ಇತರೆ ದಾಖಲೆಗಳನ್ನು ಕನ್ನಡ ಬದಲಾಗಿ ಮರಾಠಿ ಭಾಷೆಯಲ್ಲಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ, ಪಾಲಿಕೆ ವಿರೋಧ ಪಕ್ಷದ ನಾಯಕ ಮುಜಮ್ಮಿಲ ಡೋಣಿ ಭಾಷಾ ಅಲ್ಪಸಂಖ್ಯಾತರ ಆಧಾರದ ಮೇಲೆ ನಮಗೂ ಉರ್ದು ಭಾಷೆಯಲ್ಲಿ ದಾಖಲೆ ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ ಆಗಿರುವುದರಿಂದ ಪಾಲಿಕೆ ಆಡಳಿತ ವ್ಯವಹಾರಗಳೆಲ್ಲವೂ ಕನ್ನಡಲ್ಲಿಯೇ ನಡೆಯಬೇಕು. ಭಾಷಾ ವಿಷಯ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿರುವ ಎಂಇಎಸ್ನವರು ಕನ್ನಡ ಭಾಷೆ ಏಕೆ ಕಲಿಯುತ್ತಿಲ್ಲ. ಎಲ್ಲ ಸೌಲಭ್ಯ, ಸೌಕರ್ಯಗಳು ಬೇಕು. ಆದರೆ, ಕನ್ನಡ ಬೇಡ ಅಂದರೆ ಏನರ್ಥ? ಯಾವುದೇ ಕಾರಣಕ್ಕೂ ಕನ್ನಡ ಹೊರತು ಪಡಿಸಿ ಬೇರೆ ಭಾಷೆಯಲ್ಲಿ ದಾಖಲೆಗಳನ್ನು ನೀಡುವಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಪರಿಷತ್ ಕಾರ್ಯದರ್ಶಿ ಉದಯಕುಮಾರ ತಳವಾರ ಮಾತನಾಡಿ, ಮಹಾನಗರ ಪಾಲಿಕೆ ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿದೆ. ಆಡಳಿತದ ಹಿತದೃಷ್ಟಿಯಿಂದ, ಅಭಿವೃದ್ಧಿ ಅನುಕೂಲಕ್ಕಾಗಿ ಕನ್ನಡವನ್ನು ಇತರ ಭಾಷೆಗಳಿಗೆ ಭಾಷಾಂತರಗೊಳಿಸಿ ದಾಖಲೆಗಳನ್ನು ನೀಡುತ್ತಿದ್ದೇವೆ. ಆದರೆ, ಇದು ಕಡ್ಡಾಯವಲ್ಲ. ಪಾಲಿಕೆಯಲ್ಲಿ ಮರಾಠಿ, ಉರ್ದು ಭಾಷಾಂತರ ಸಿಬ್ಬಂದಿ ನಿಯೋಜನೆಗೆ ಅವಕಾಶ ಇಲ್ಲ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪುಂಡಾಟಿಕೆ ಏನು?
ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ, ಸ್ಥಳೀಯ ಸಂಸ್ಥೆಗಳು ಕನ್ನಡದಲ್ಲಿ ಯಾವುದೇ ದಾಖಲೆಗಳನ್ನು ನೀಡುವುದಿಲ್ಲ. ಕರ್ನಾಟಕದಲ್ಲಿ ನಾವ್ಯಾಕೆ ಕೊಡಬೇಕು? ಪಾಲಿಕೆಯಲ್ಲಿ ಕನ್ನಡ ಭಾಷೆ ಸಾರ್ವಭೌಮ ಎಂಬುದನ್ನು ಸದಸ್ಯರು ತಿಳಿದುಕೊಳ್ಳಬೇಕು. ಸರ್ಕಾರವು ಭಾಷಾ ವಿಷಯದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು.
| ಅಶೋಕ ಚಂದರಗಿ ಅಧ್ಯಕ್ಷ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕ್ರಿಯಾ ಸಮಿತಿ