ಮಲೆನಾಡಲ್ಲೂ ಶಕ್ತಿ ಯೋಜನೆಗೆ ಚಾಲನೆ

shakti yajana
ಶಕ್ತಿ ಯೋಜನೆ ಜಾರಿಗೊಂಡ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ಸಂಭ್ರಮಿಸಿದರು.
Published on

ಶಿವಮೊಗ್ಗ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯಾದ್ಯಂತ ಮಹಿಳೆಯರಿಗೆ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಮಲೆನಾಡು ಶಿವಮೊಗ್ಗದಲ್ಲೂ ಭಾನುವಾರ ಮಧ್ಯಾಹ್ನ ಚಾಲನೆ ದೊರೆಯಿತು. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದು ಮಾತ್ರ ಬಿಜೆಪಿ ಶಾಸಕ.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಬೇಕಿತ್ತು. ಆದರೆ ಉಸ್ತುವಾರಿ ಸಚಿವರು ಸಮಾರಂಭಕ್ಕೆ ಗೈರಾದ ಕಾರಣ ಶಿವಮೊಗ್ಗ ನಗರ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಹಲವು ಗೊಂದಲಗಳ ನಡುವೆಯೂ ಮೊದಲ ದಿನವೇ ಸಾವಿರಾರು ಮಹಿಳೆಯರು ಶಿವಮೊಗ್ಗದಿಂದ ಜಿಲ್ಲೆಯ ವಿವಿಧೆಡೆ ಸೇರಿ ರಾಜ್ಯದ ನಾನಾ ಭಾಗಗಳಿಗೆ ಉಚಿತವಾಗಿ ಪ್ರಯಾಣಿಸಿದರು. ಬೆರಳೆಣಿಕೆಯಷ್ಟೇ ಮಂದಿ ಉಚಿತ ಪ್ರಯಾಣವನ್ನು ವಿರೋಧಿಸಿದರೆ ಬಹುತೇಕ ಮಹಿಳೆಯರು ಫ್ರೀ ಟಿಕೆಟ್ ಪಡೆದು ಖುಷಿಪಟ್ಟರು. ದಾಖಲಾತಿಗಳನ್ನು ಇಟ್ಟುಕೊಳ್ಳದೇ ಬಂದಿದ್ದ ಕೆಲವರಿಗೆ ಮೊದಲ ದಿನ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು.
ಒಂದೆಡೆ ಸಂಭ್ರಮ, ಮತ್ತೊಂದೆಡೆ ಬೇಸರ:
ಗಂಡ-ಹೆಂಡತಿ ಇಬ್ಬರೂ ರಾಜಧಾನಿ ಬೆಂಗಳೂರಿಗೆ ಪ್ರಯಾಣಿಸಿದರು. ಪತ್ನಿಗೆ ಉಚಿತವಾಗಿದ್ದ ಕಾರಣ ಖುಷಿ ಪಟ್ಟರೆ ಆಕೆ ಪತಿ ಹಣ ಕೊಟ್ಟು ಟಿಕೆಟ್ ಪಡೆದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್‌ಗೆ ಕೇವಲ ಮಹಿಳೆಯರಷ್ಟೇ ಮತ ಹಾಕಿಲ್ಲ. ನಾವೂ ಹಾಕಿದ್ದೇವೆ. ನಮಗೂ ಉಚಿತ ಅವಕಾಶ ಕಲ್ಪಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ಬಸ್‌ಗಳಲ್ಲೂ ಪುರುಷರಿಗೆ ಶೇ.50ರಷ್ಟು ಆಸನಗಳನ್ನು ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net