ಶಕ್ತಿ ಯೋಜನೆ ಆರ್ಥಿಕತೆಗೆ ಅಡಿಪಾಯ; ಸಿಎಂ ಸಿದ್ದರಾಮಯ್ಯ ಸಮರ್ಥನೆ

IMG-20230925-WA0016
Published on

ಬೆಂಗಳೂರು: ಮಹಿಳೆಯರನ್ನು ಆಕರ್ಷಿಸಲು, ಜ‌ನಪ್ರಿಯತೆಗಾಗಿ ಶಕ್ತಿ ಯೋಜನೆ ಜಾರಿಗೊಳಿಸಿದ್ದಲ್ಲ. ಸಾರ್ವತ್ರಿಕ ಮೂಲ ಆದಾಯದ ಖಾತರಿ ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಸಾರಿಗೆ ನಿಗಮಗಳ ಬಸ್ ಗಳಲ್ಲಿ ಲಕ್ಷಾಂತರ ಮಹಿಳೆಯರು ಪ್ರಯಾಣಿಸುವ ಮೂಲಕ ಸರ್ಕಾರದ ಉದ್ದೇಶ ಈಡೇರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ‌ ಸಮರ್ಥಿಸಿಕೊಂಡರು.

ಶಕ್ತಿ ಯೋಜನೆಯಡಿ ಈವರೆಗೆ 50 ರಿಂದ 60 ಲಕ್ಷ ಮಹಿಳೆಯರು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರವಾಸೋದ್ಯಮ, ಶ್ರದ್ಧಾ ಕೇಂದ್ತಗಳಿಗೆ ಮಹಿಳೆಯರು, ಪ್ರವಾಸಿಗರ ಹೆಚ್ಚೆಚ್ಚು ಭೇಟಿಯಿಂದ ಹಣ ಪ್ರಸರಣ, ವ್ಯಾಪಾರ-ವಹಿವಾಟು ಹೆಚ್ಚಲಿದೆ. ಆ ಮೂಲಕ  ಆರ್ಥಿಕತೆ ವೃದ್ಧಿ, ಜಿಡಿಪಿಗೂ ಬಲ ನೀಡುತ್ತದೆ ಎಂದು ಪ್ರತಿಪಾದಿಸಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ  ಸ್ಮಾರಕದ ಪ್ರತಿಕೃತಿ ಸ್ವಚ್ಛಗೊಳಿಸುವ ಮೂಲಕ ನಮ್ಮ ಸ್ಮಾರಕ ಯೋಜನೆಯ ಸಂವಾದ ಹಾಗೂ ಡಿಜಿಟಲ್ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು ಸ್ಮಾರಕ ದತ್ತು ತೆಗೆದುಕೊಳ್ಳಲು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳು ಆಸಕ್ತಿವಹಿಸಿ ಮುಂದೆ ಬಂದಿರುವುದು ಸಂತೋಷದ ವಿಷಯ. ರಾಜ್ಯದಲ್ಲಿ ಸಾವಿರಾರು ಸ್ಮಾರಕಗಳ ಸಂರಕ್ಷಣೆ ಸರ್ಕಾರದ ಕರ್ತವ್ಯವಾದರೂ ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದರು.

ಭವಿಷ್ಯಕ್ಕೆ ಬುನಾದಿ

ಇತಿಹಾಸ ಗೊತ್ತಿರುವವರು ಮಾತ್ರ ಭವಿಷ್ಯ ರೂಪಿಸುವುದಕ್ಕೆ ಸಮರ್ಥರು. ರಾಜ ಮಹಾರಾಜರು ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಸ್ಮಾರಕಗಳನ್ನು ನೀಡಿದ್ದು, ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು, ಇತಿಹಾಸ ಹಾಗೂ ಪರಂಪರೆ ಬಗ್ಗೆ ತಿಳಿಸಿ ಕೊಡುವುದು ಅಷ್ಟೇ ಮುಖ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಮಾತನಾಡಿ ರಾಜ್ಯದ‌ ಇತಿಹಾಸ, ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಸ್ಮಾರಕಗಳ, ಪ್ರಾಚ್ಯಾವಶೇಷಗಳ ರಕ್ಷಣೆ, ಸಂರಕ್ಷಣೆ ಹಾಗೂ ಪುನರುಜ್ಜೀವನಗೊಳಿಸಲು ನಮ್ಮ ಸ್ಮಾರಕ ಯೋಜನೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ ಜತೆಗೆ ಉದ್ಯಮಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕ ಸಹಕಾರ ಪಡೆದು, ಈ ಯೋಜನೆ ಅನುಷ್ಠಾನಕ್ಕೆ ಡಿಜಿಟಲ್ ವೇದಿಕೆ ಸ್ಥಾಪಿಸಲಾಗಿದೆ. ರಾಜ್ಯದ 848 ಸಂರಕ್ಷಿತ ಸ್ಮಾರಕಗಳ ಪೈಕಿ 280 ಸ್ಮಾರಕಗಳನ್ನು ಆಯ್ಕೆ ಮಾಡಿಕೊಂಡು ವೇದಿಕೆಯಲ್ಲಿ ಅಳವಡಿಸಿದ್ದು, ಸ್ನಾರಕ ದತ್ತು ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಕಲ್ಕೀ ಫೌಂಡೇಷನ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್,ರಾಷ್ಟ್ರೀಯ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ದಕ್ಷಿಣ ಭಾರತ ಪ್ರಾದೇಶಿಕ ನಿರ್ದೇಶಕ ನವರತ್ನ ಕೆ.ಆರ್.ಪಾಠಕ್, ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಉದ್ಯಮಿಗಳು, ಕಂಪನಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net