

ಮಂಗಳೂರು: ಗುರುವಿಗೆ ಅನಾದಿ ಕಾಲದಿಂದಲೂ ಉನ್ನತ ಸ್ಥಾನಮಾನ ಇದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಕೆ. ಸಿ. ನಾಯಕ್ ಹೇಳಿದರು.
ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸುಧರ್ಮ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ವಿಭಾಗ ಅಭ್ಯಾಸ ವರ್ಗ ಉದ್ಘಾಟಿಸಿ, ಅವರು ಮಾತನಾಡಿದರು.
ಭಾರತದಲ್ಲಿ ಗುರುಕುಲದ ಶಿಕ್ಷಣ ಇತ್ತು. ಅದು ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದೆ. ದೇಶ ಮೊದಲು ಎಂಬ ತತ್ವದಲ್ಲಿ ನಾವು ಮುನ್ನಡೆಯಬೇಕು. ಎಲ್ಲಾ ರಂಗದಲ್ಲಿರುವ ವ್ಯಕ್ತಿಗಳಿಗೆ ಮಾರ್ಗದರ್ಶನ ಮಾಡಿರುವ ಏಕೈಕ ಸ್ಥಾನ ಹೊಂದಿರುವ ವ್ಯಕ್ತಿ ಶಿಕ್ಷಕ ಮಾತ್ರ ಎಂದವರು ಹೇಳಿದರು.
ಶಕ್ತಿ ವಿದ್ಯಾ ಸಂಸ್ಥೆ ಪ್ರಧಾನ ಸಲಹೆಗಾರ ಮತ್ತು ನಿಕಟ ಪೂರ್ವ ಸಿಂಡಿಕೇಟ್ ಸದಸ್ಯ ರಮೇಶ ಕೆ ಮಾತನಾಡಿ, ಈ ವಿಭಾಗ ಅಭ್ಯಾಸ ವರ್ಗದಲ್ಲಿ ನಾವೆಲ್ಲರೂ ನಮ್ಮ ಕಾರ್ಯ ಶೈಲಿ, ಸೈದ್ಧಾಂತಿಕ ಹಿನ್ನಲೆ ಸಂಘಟನೆಯನ್ನು ಬಲಪಡಿಸುವ ಕುರಿತಂತೆ ನಾವು ಹೆಚ್ಚಿನ ವಿಷಯಗಳನ್ನು ಇಲ್ಲಿ ಪಡೆಯಬೇಕೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಕೆಆರ್‌ಎಮ್‌ಎಸ್‌ಎಸ್ ನ ರಾಜ್ಯ ಅಧ್ಯಕ್ಷ ಡಾ.ಗುರುನಾಥ ಬಡಿಗೇರ ಮಾತನಾಡಿ, ನಮ್ಮದು ರಾಷ್ಟ್ರದ ಬಗ್ಗೆ ನಿರಂತರ ಚಿಂತನೆ ಮಾಡುವ ಸಂಘಟನೆ ಎಂದರು.
ಹಿರಿಯ ಪ್ರಾಧ್ಯಾಪಕರಾದ ಡಾ.ಚ. ನಾ ಶಂಕರರಾವ್ ಮತ್ತು ಪ್ರೊ.ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.
ಅಧ್ಯಕ್ಷ ಡಾ.ಸುಧಾ ವೈದ್ಯ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟೇಶ ನಾಯಕ್ ವಂದಿಸಿದರು. ಮಮತಾ ಅವಿನಾಶ್ ನಿರೂಪಿಸಿದರು.