ಭಿನ್ನರ ಚಾಡಿಗೆ ಷಾ ಉಪೇಕ್ಷೆ; ವಿಜಯೇಂದ್ರ ವಿರುದ್ಧದ ಚಟುವಟಿಕೆಗಳಿಗಿಲ್ಲ ಆದ್ಯತೆ, ಮುಖಂಡರ ಅಭಿಪ್ರಾಯ ಸಂಗ್ರಹಕ್ಕಷ್ಟೇ ಮಾನ್ಯತೆ

Amit Shah
Published on

ನವದೆಹಲಿ: ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಿರಿಯ ಸಚಿವರು, ಸಂಸದರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡ ಭಿನ್ನರ ಚಟುವಟಿಕೆ ಮತ್ತು ಅವರ ಸಂದೇಶಕ್ಕೆ ಕ್ಯಾರೇ ಎನ್ನದಿರುವ ಬೆಳವಣಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಜ್ಯ ಬಿಜೆಪಿ ಚಟುವಟಿಕೆಗಳು ಬಿರುಸಾಗಿವೆ. ಕೇಂದ್ರ ಸಚಿವ ಸೋಮಣ್ಣ ನಿವಾಸದಲ್ಲಿ ಆಯೋಜನೆಗೊಂಡಿದ್ದ ಪೂಜೆಯಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ದೆಹಲಿಗೆ ದೌಡಾಯಿಸಿದ್ದ ಭಿನ್ನರ ಗುಂಪು ವಿವಿಧ ಸ್ವರೂಪದ ಸರಣಿ ಸಭೆಗಳನ್ನು ನಡೆಸಿತ್ತು. ತಮ್ಮ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ಮುಟ್ಟಿಸಲೇಬೇಕೆಂದು ತಂತ್ರ ಹೂಡಿತ್ತು. ಈ ಬೆಳವಣಿಗೆ ಬಳಿಕ ಕೇಂದ್ರ ಸಚಿವ ಸೋಮಣ್ಣ ಮಂಗಳ ವಾರ ಅಮಿತ್ ಷಾ ಅವರನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ವಿವಿಧ ರೈಲ್ವೆ ಯೋಜನೆಗಳ ಕುರಿತಷ್ಟೇ ಚರ್ಚೆ ನಡೆಯಿತೆಂಬುದು ಸದ್ಯ ಸಿಕ್ಕಿರುವ ಅಧಿಕೃತ ಮಾಹಿತಿ. ಇಷ್ಟರ ನಡುವೆಯೇ ತಮ್ಮ ನಿವಾಸದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ಆದಿಯಿಂದಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಸೋಮಣ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಅಮಿತ್ ಷಾ ಮಾತ್ರ ರಾಜಕೀಯ ವಿಚಾರವನ್ನು ಆಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ರೈಲ್ವೆ ಬೇಡಿಕೆ ಇಟ್ಟ ಸೋಮಣ್ಣ: ಸಂಸತ್ ಭವನದ ಕಚೇರಿಯಲ್ಲಿ ಅಮಿತ್ ಷಾ ಅವರನ್ನು ಭೇಟಿಯಾದ ಸೋಮಣ್ಣ, ತುಮಕೂರು, ಚಿತ್ರದುರ್ಗ, ದಾವಣಗೆರೆ ರೈಲ್ವೆ ಲೈನ್ ಭಾಗವಾದ ತಿಮ್ಮರಾಜನಹಳ್ಳಿ ಮತ್ತು ತಾವರೆಕೆರೆ ಮಧ್ಯದ ಕಾಮಗಾರಿಗೆ ಸಂಬಂಧಿಸಿದಂತೆ ರೈಲ್ವೆ ಬೋರ್ಡ್ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದ ಪ್ರಸ್ತಾವನೆಯನ್ನು ಅನುಮೋದಿಸಿಕೊಡಬೇಕೆಂದು ಮವವಿ ಮಾಡಿಕೊಂಡಿದ್ದಾರೆ. ಇಲಾಖಾ ಕಾಮಗಾರಿ ಕುರಿತ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಸೋಮಣ್ಣ ಹೇಳಿದ್ದಾರೆ.

ನೋಟಿಸ್ ಕಂಪನ: ಭಿನ್ನರ ನಾಯಕತ್ವ ವಹಿಸಿದ್ದ ಯತ್ನಾಳ್​ಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ನೀಡಿರುವ ಬೆಳವಣಿಗೆ ಪಕ್ಷದಲ್ಲಿ ಕಂಪನ ಎಬ್ಬಿಸಿದೆ. ಈ ಹಿಂದೆ ಪಕ್ಷ ನೋಟಿಸ್ ಕೊಟ್ಟಿರುವ ವಿಚಾರ ಹಾಗೂ ಅದಕ್ಕೆ ಯತ್ನಾಳ್ ಸಮಜಾಯಿಷಿ ನೀಡುವ ಕುರಿತು ಹೊಸ ನೋಟಿಸ್​ನಲ್ಲಿ ಪ್ರಸ್ತಾಪವಾಗಿರುವುದು ಪರಿಸ್ಥಿತಿಯ ಗಂಭೀರತೆ ಸಾರಿದೆ. ಇದೇ ಕಾರಣಕ್ಕೆ ಯತ್ನಾಳ್ ಪರವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಲ್ಲುತ್ತಿದ್ದವರೂ ಸಹ ಮೆತ್ತಗಾಗಿದ್ದಾರೆ. ನೋಟಿಸ್ ಜಾರಿಯಾಗಿ 24 ತಾಸು ಕಳೆದಿದ್ದು, ಗುರುವಾರ ಸಂಜೆಯೊಳಗೆ ಯತ್ನಾಳ್ ಉತ್ತರ ನೀಡಬೇಕಾಗಿದೆ. ಉತ್ತರ ನೀಡದೇ ಹೋದರೆ ಪಕ್ಷದ ವರಿಷ್ಠರಿಗೆ ಮುಂದಿನ ತೀರ್ವನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದೇ ಕಾರಣಕ್ಕೆ ಇಡೀ ಬೆಳವಣಿಗೆ ಮತ್ತಷ್ಟು ಕಾವು ಪಡೆದುಕೊಂಡಿದೆ.

ಶೀಘ್ರದಲ್ಲೇ ಎಲ್ಲವೂ ಸುಖಾಂತ್ಯ ಅಶೋಕ್, ಬೊಮ್ಮಾಯಿ ವಿಶ್ವಾಸ: ರಾಜ್ಯ ಬಿಜೆಪಿಯ ಅಂತಃಕಲಹದ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಎಲ್ಲವೂ ಸರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಿನ್ನಾಭಿಪ್ರಾಯ ಬಗೆಹರಿಸುವ ರಾಜಿ ಸಂಧಾನಕ್ಕೆ ರಾಜ್ಯ ನಾಯಕರ ಪ್ರಯತ್ನದ ಅಗತ್ಯವೇ ಇಲ್ಲ. ವರಿಷ್ಠರೇ ಇತ್ಯರ್ಥ ಪಡಿಸುತ್ತಾರೆ. ಹಾಗೆಯೇ, ಬಸನ ಗೌಡ ಪಾಟೀಲ್ ಯತ್ನಾಳ್​ಗೆ

ನೋಟಿಸ್ ನೀಡಿರುವುದು ಪಕ್ಷದ ಅಂತರಿಕ ವಿಚಾರವಾಗಿದ್ದು, ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಅಶೋಕ್ ಹೇಳಿದ್ದಾರೆ. ಇನ್ನು ಪಕ್ಷದೊಳಗಿನ ಗೊಂದಲ ಬಗೆಹರಿಸಲು ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ನಾವು ಅದಕ್ಕೆ ಬದ್ಧ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ತಮಗೆ ಬಂದಿರುವ ನೋಟಿಸ್​ಗೆ ಏನು ಉತ್ತರ ಕೊಟ್ಟಿದ್ದಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅಂತಿಮವಾಗಿ ಹೈಕಮಾಂಡ್ ಪ್ರವೇಶ ಮಾಡಿರುವುದರಿಂದ ಇದು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಮುಗಿಯುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net