ಶಾಹೀದ್ ಆಫ್ರಿದಿ ಹೊಗಳಿಕೆ; ರಾಹುಲ್ ಗಾಂಧಿಗೆ ಹೊಸ ಅಭಿಮಾನಿ ಸಿಕ್ಕಿದ್ದಾರೆ ಎಂದು ಕಿಚಾಯಿಸಿದ ಬಿಜೆಪಿ| BJP

Untitled design (38)
Published on

BJP: ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ನಾಯಕ ಶಾಹೀದ್ ಆಫ್ರಿದಿ ಲೋಕಸಭಾ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯನ್ನು ತುಂಬಾ ಒಳ್ಳಯ ಲೀಡರ್ ಎಂದು ಹೊಗಳ್ಳಿದ್ದನ್ನು ಬಿಜೆಪಿ ಕಿಚಾಯಿಸಿದ್ದು, ರಾಹುಲ್ ಗಾಂಧಿಯ ಹೊಸ ಫ್ಯಾನ್ ಬಾಯ್ ಎಂದು ಮಂಗಳವಾರ(ಸೆ . 16) ವ್ಯಂಗ್ಯವಾಗಿ ಟೀಕಿಸಿದೆ.

ಇಂಡಿಯಾ-ಪಾಕ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದ ಬಳಿಕ ಪಾಕ್ ಆಟಗಾರರ ಕೈಯನ್ನು ಕುಲುಕಿರಲಿಲ್ಲ. ಈ ಕುರಿತು ವಿವಾದದ ಬಗ್ಗೆ ಪಾಕ್ ಸುದ್ದಿ ವಾಹಿನಿಯೊಂದರ ಪ್ಯಾನಲ್ ಚರ್ಚೆಯಲ್ಲಿ ಶಾಹೀದ್ ಆಫ್ರಿದಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಭಾರತವನ್ನು ಇಸ್ರೇಲ್ ಮಾಡಲು ಹೊರಟಿದೆ ಎಂದು ಟೀಕಿಸಿದ್ದರು. ಇದೇ ವೇಳೆ ರಾಹುಲ್ ಗಾಂಧಿ ಒಳ್ಳೆಯ ಮನಸ್ಸಿನ ವ್ಯಕ್ತಿ, ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತಾರೆ ಎಂದು ಹೊಗಳಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಪಾಕಿಸ್ತಾನದ ಪ್ರಿಯರು!, ಶಾಹಿದ್ ಅಫ್ರಿದಿ ಮತ್ತು ಪಾಕಿಸ್ತಾನಿ ಜನರು ರಾಹುಲ್ ಗಾಂಧಿಯನ್ನು ತಮ್ಮ ನಾಯಕನನ್ನಾಗಿ ಮಾಡಿಕೊಳ್ಳಬಹುದು ಎಂದು ಟೀಕಿಸಿದ್ದಾರೆ.

ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಈ ಕುರಿತು ವ್ಯಂಗ್ಯವಾಡಿದ್ದು, ರಾಹುಲ್ ಗಾಂಧಿ ಹೊಸ ಅಭಿಮಾನಿಯನ್ನು ಕಂಡುಕೊಂಡಿದ್ದಾರೆ. ಅದು ಅವಮಾನಿತ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ. ಭಾರತದ ಶತ್ರುಗಳು ಹೊಗಳಿಕೆಯ ಸುರಿಮಳೆಗೈದಾಗ, ಕಾಂಗ್ರೆಸ್ ಭಾರತಕ್ಕೆ ವಿರುದ್ಧವಾಗಿ, ಪಾಕಿಸ್ತಾನದೊಂದಿಗೆ ಇರುವ ಪಕ್ಷ ಎಂದು ನಿಮಗೆ ತಿಳಿದಿರುತ್ತದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ಬಿಜೆಪಿ ಶೆಹಜಾದ್ ಪೂನಾವಾಲಾ ಸಹ, ಆಶ್ಚರ್ಯಪಡಬೇಡಿ, ಭಾರತವನ್ನು ದ್ವೇಷಿಸುವ ಪ್ರತಿಯೊಬ್ಬರೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ನಲ್ಲಿ ಮಿತ್ರರನ್ನು ಹೊಂದಲು ಬಯಸುತ್ತಾರೆ.ಸೊರೊಸ್‌ನಿಂದ ಶಾಹಿದ್‌ವರೆಗೆ, ಐಎನ್‌ಸಿ ಅನ್ನೋದು ಇಸ್ಲಾಮಾಬಾದ್ ರಾಷ್ಟ್ರೀಯ ಕಾಂಗ್ರೆಸ್ ಎಂದು ಟೀಕಿಸಿದ್ದಾರೆ.

ಬಿಜೆಪಿ ಟೀಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರೀಯಾ ಶ್ರೀನೇಟ್, ಶಾಹೀದ್ ಆಫ್ರಿದಿ ಜೊತೆ ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಅನುರಾಗ್ ಠಾಕೂರ್ ಇರುವ ಫೋಟೋ ಹಾಕಿ ವಾಗ್ದಾಳಿ ನಡೆಸಿದ್ದಾರೆ. ನೀವು ಸಿಹಿಯಾಗಿ ಮಾತನಾಡುತ್ತೀರಿ, ಸ್ನೇಹವನ್ನು ಕಾಪಾಡಿಕೊಳ್ಳುತ್ತೀರಿ. ತದನಂತರ ನೀವು ನಮ್ಮನ್ನು ಪ್ರಶ್ನಿಸುತ್ತೀರಾ? ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net