

ನವದೆಹಲಿ: ಶಾಹೀನ್ ಬಾಗ್ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಇತ್ತೀಚೆಗೆ ಕಪಿಲ್ ಗುಜ್ಜಾರ್ ಎಂಬಾತ ಗುಂಡು ಹಾರಿಸಿದ್ದ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿ ಬಳಿ ಅಪ್ರಾಪ್ತನೋರ್ವ ಗುಂಡುಹಾರಿಸಿದ ಎರಡೇ ದಿನದಲ್ಲಿ ಈ ಘಟನೆ ನಡೆದಿತ್ತು.
ಶಾಹೀನ್ಬಾಗ್ನಲ್ಲಿ ಫೈರಿಂಗ್ ಮಾಡಿದ ಕಪಿಲ್ ಗುಜ್ಜರ್ ಆಮ್ ಆದ್ಮಿ ಪಕ್ಷಕ್ಕೆ ಸೇರಿದವನು ಎನ್ನಲಾಗಿತ್ತು. ಅಲ್ಲದೆ ಆಪ್ನ ಟೊಪ್ಪಿ ಹಾಕಿಕೊಂಡು, ಕೆಲವು ಸದಸ್ಯರ ಜತೆ ಇರುವ ಫೋಟೋ ಕೂಡ ವೈರಲ್ ಆಗಿತ್ತು. ಆತನೇ ತಾನು ಆಮ್ ಆದ್ಮಿ ಪಕ್ಷದವನು ಎಂದು ಪೊಲೀಸರೆದುರು ಒಪ್ಪಿಕೊಂಡಿದ್ದ.
ಆದರೆ ನಿನ್ನೆ ಕಪಿಲ್ ಗುಜ್ಜರ್ ಕುಟುಂಬ ಅದನ್ನು ಅಲ್ಲಗಳೆದಿತ್ತು. ಆತನ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡುತ್ತ, ನಾವ್ಯಾರೂ ಯಾವುದೇ ಪಕ್ಷಕ್ಕೂ ಸೇರಿದವರಲ್ಲ. ಕಪಿಲ್ ಕೂಡ ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದಿದ್ದರು.
ಕಳೆದ ಲೋಕಸಭಾ ಚುನಾವಣೆ ವೇಳೆಗೆ ಪ್ರಚಾರಕ್ಕೆ ಬಂದ ಆಮ್ ಆದ್ಮಿ ಮುಖಂಡರು, ಕಾರ್ಯಕರ್ತರು ನಮಗೆಲ್ಲ ಟೊಪ್ಪಿ ಕೊಟ್ಟಿದ್ದರು. ಅದನ್ನು ಹಾಕಿಕೊಂಡು ಅವರೊಟ್ಟಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದೇವೆ ಅಷ್ಟೇ ಎಂದು ಹೇಳಿದ್ದರು.
ಆದರೆ ಅದರ ಬೆನ್ನಲ್ಲೇ ಕಪಿಲ್ ಗುಜ್ಜರ್ ತಂದೆ ಹೊಸ ವಿಚಾರವನ್ನು ತಿಳಿಸಿದ್ದಾರೆ. ನನ್ನ ಮಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಕಟ್ಟಾ ಅನುಯಾಯಿ ಎಂದು ಹೇಳಿದ್ದಾರೆ. ಕಪಿಲ್ ಯಾವಾಗಲೂ ಹಿಂದುತ್ವ, ಹಿಂದು ರಾಷ್ಟ್ರದ ಬಗ್ಗೆ ಮಾತನಾಡುತ್ತಿರುತ್ತಾನೆ ಎಂದಿದ್ದಾರೆ.
ಅಲ್ಲದೆ ಶಾಹೀನ್ ಬಾಗ್ ಪ್ರತಿಭಟನೆಯಿಂದ ರಸ್ತೆಗಳು ಬ್ಲಾಕ್ ಆಗಿದ್ದವು. ನನ್ನ ಮಗನೂ ಸೇರಿ ಹಲವರಿಗೆ ತೊಂದರೆಯಾಗಿತ್ತು. ಒಂದು ತಾಸಿನಲ್ಲಿ ಹೋಗಬಹುದಾದ ಜಾಗಕ್ಕೆ ತಲುಪಲು ನಾಲ್ಕು ಗಂಟೆ ಬೇಕಾಗುತ್ತಿತ್ತು. ಇದು ಆತನನ್ನು ಕೆರಳಿಸಿರಬಹುದು ಎಂದು ಕಪಿಲ್ ಗುಜ್ಜರ್ ತಂದೆ ಹೇಳಿದ್ದಾರೆ.(ಏಜೆನ್ಸೀಸ್)