

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಿನಿಂದಲೂ ಶಾಹೀನ್ ಬಾಗ್ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಲೇ ಇದೆ.
ಸಿಎಎ ವಿರೋಧಿಸಿ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಾಳೆ (ಫೆ.16) ಮೆರವಣಿಗೆ ಮೂಲಕ ಗೃಹ ಸಚಿವ ಅಮಿತ್ ಷಾ ಅವರ ನಿವಾಸಕ್ಕೆ ತೆರಳಲಿದ್ದಾರೆ. ಈ ಬಗ್ಗೆ ಪ್ರತಿಭಟನಾಕಾರರೇ ಇಂದು ಘೋಷಣೆ ಮಾಡಿದ್ದಾರೆ. ನಮ್ಮ ಬೇಡಿಕೆಗಳ ಪಟ್ಟಿಯನ್ನು ಗೃಹಸಚಿವರ ಎದುರು ಇಡುತ್ತೇವೆ. ಅದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದು ನಮ್ಮ ಪ್ರಥಮ ಬೇಡಿಕೆ ಎಂದು ಹೇಳಿದ್ದಾರೆ.
ಆದರೆ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಅಮಿತ್ ಷಾ ಅವರು ಮಾತುಕತೆ ನಡೆಸುವ ಯಾವುದೇ ಮನವಿಯೂ ನಮ್ಮೆದುರು ಬಂದಿಲ್ಲ ಎಂದು ಗೃಹಸಚಿವಾಲಯದ ಮೂಲಗಳು ತಿಳಿಸಿವೆ. ಪ್ರತಿಭಟನಾಕಾರರು ಹೇಳುವಂತೆ, ಫೆ.16ರಂದು ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ಪ್ರಾರಂಭಿಸಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾರಿಗೆ ಏನೇ ಅನುಮಾನವಿದ್ದರೂ, ಅದರಿಂದ ಏನೇ ಸಮಸ್ಯೆ ಆಗುತ್ತಿದೆ ಎನ್ನಿಸಿದರೂ ನೇರವಾಗಿ ಬಂದು ನನ್ನನ್ನೇ ಭೇಟಿ ಮಾಡಿ, ಚರ್ಚಿಸಿ ಎಂದು ಇತ್ತೀಚೆಗೆ ಅಮಿತ್ ಷಾ ಹೇಳಿದ್ದಾರೆ. ಹಾಗಾಗಿ ನಾವು ಅವರ ನಿವಾಸಕ್ಕೆ ತೆರಳಿ ನಮ್ಮ ಬೇಡಿಕೆಗಳನ್ನು ಸಲ್ಲಿಸುತ್ತೇವೆ. ಶಾಹೀನ್ ಬಾಗ್ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ನಾಳೆ ಅಮಿತ್ ಷಾ ನಿವಾಸಕ್ಕೆ ಹೋಗುತ್ತಿದ್ದೇವೆ ಎಂದು ಪ್ರತಿಭಟನಾಕಾರನೋರ್ವ ಮಾಧ್ಯಮಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ನಮ್ಮ ಪರ ಮಾತನಾಡುವಂತೆ ಯಾವುದೇ ಆಯೋಗವನ್ನಾಗಲೀ, ಅಧಿಕಾರಿಗಳನ್ನಾಗಲೀ ಗೃಹಸಚಿವರ ಬಳಿ ಕಳುಹಿಸುವುದಿಲ್ಲ. ನಾವೇ ಸ್ವತಃ ಅಲ್ಲಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)