

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ನೋಯ್ಡಾಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಿಂದಾಗಿ ಕಳೆದ 70 ದಿನಗಳಿಂದ ಪ್ರತಿಭಟನಾಕಾರರದಿಂದ ಬ್ಲಾಕ್ ಆಗಿದ್ದ ರಸ್ತೆಯನ್ನು ಶನಿವಾರ ಮತ್ತೆ ತೆರೆಯಲಾಗಿದೆ.
ಶಾಹೀನ್ ಬಾಗ್ ರಸ್ತೆಯು ದೆಹಲಿಯ ಜಾಮಿಯಾದಿಂದ ಉತ್ತರ ಪ್ರದೇಶದ ನೋಯ್ಡಾ ಮತ್ತು ಹರಿಯಾಣದ ಫರೀದಾಬಾದ್ಗೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಸಿಎಎ ವಿರೋಧಿ ಪ್ರತಿಭಟನೆಯಿಂದಾಗಿ ರಸ್ತೆಯನ್ನು ಬ್ಲಾಕ್ ಮಾಡಲಾಗಿತ್ತು. ಇದೀಗ ಮತ್ತೆ ತೆರೆದಿರುವುದು ಪ್ರಯಾಣಿಕರಿಗೆ ಖುಷಿಯ ವಿಚಾರವಾಗಿದೆ. ಪ್ರತಿಭಟನೆ ಆರಂಭವಾದ ದಿನದಿಂದಲೂ ಶಾಹೀನ್ ಬಾಘ್ನಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮೂಲಗಳ ಪ್ರಕಾರ ಶಾಹೀನ್ ಬಾಗ್ ಪ್ರತಿಭಟನಾಕಾರರು ರಸ್ತೆಯನ್ನು ತೆರವುಗೊಳಿಸುವ ವಿಚಾರವಾಗಿ ದೆಹಲಿ ಪೊಲೀಸರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ಇತ್ತೀಚಿನ ಬೆಳವಣಿಗೆ ಬಗ್ಗೆ ನಮಗೂ ಮಾಹಿತಿ ಇಲ್ಲವೆಂದು ದೆಹಲಿ ಪೊಲೀಸರು ಕೂಡ ಹೇಳಿದ್ದಾರೆ. ಆದರೂ ಶಾಹೀನ್ ಬಾಗ್ ಪ್ರತಿಭಟನಾಕಾರರು ತೆಗೆದುಕೊಂಡು ನಿರ್ಧಾರವನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ.
ಇನ್ನೊಂದೆಡೆ ಪ್ರತಿಭಟನಾಕಾರರು ನೋಯ್ಡಾ-ಕಲಿಂದಿ ಕುಂಜ್ ಮಾರ್ಗ ನಂ.9(ಓಕ್ಲಾ ರಸ್ತೆ) ಅನ್ನು ಸಂಚಾರಕ್ಕೆ ಮುಕ್ತ ಮಾಡಿದ್ದಕ್ಕೆ ಸ್ಥಳದಲ್ಲಿ ಸಂಭ್ರಮಾಚರಣೆಯು ನಡೆದಿದೆ.
ಇದಕ್ಕೂ ಮುನ್ನಾ ಪ್ರತಿಭಟನಾಕಾರರ ಒಂದು ಗುಂಪು ರಸ್ತೆಯನ್ನು ಓಪನ್ ಮಾಡಿದ್ದರು. ಆದರೆ, ಮತ್ತೆ ಇನ್ನೊಂದು ಗುಂಪಿನಿಂದ ಮುಚ್ಚಲಾಗಿತ್ತು. ಮತ್ತೆ ಒಂದು ಗುಂಪು ರಸ್ತೆಯನ್ನು ಮರು ತೆರೆದರು. ಆದರೆ, ಇದಕ್ಕೆ ಎಲ್ಲರ ಒಪ್ಪಿಗೆ ಇದೆಯೇ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ ಎಂದು ದೆಹಲಿಯ ಆಗ್ನೇಯ ಡಿಸಿಪಿ ತಿಳಿಸಿದ್ದಾರೆ.
ಸಿಎಎ ವಿರೋಧಿಸಿ ಪ್ರಾಥಮಿಕವಾಗಿ ಸ್ಥಳೀಯ ಮಹಿಳೆಯರು ಡಿಸೆಂಬರ್ ಮಧ್ಯ ಭಾಗದಲ್ಲಿ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆ ಆರಂಭಿಸಿದರು. ಇದು ರಸ್ತೆ ಬ್ಲಾಕ್ಗೆ ಕಾರಣವಾಗಿ, ಆಗ್ನೇಯ ದೆಹಲಿ ಪ್ರದೇಶಗಳಿಂದ ನೋಯ್ಡಾ ಸಂಪರ್ಕಿಸುವ ರಸ್ತೆ ಮುಚ್ಚಲಾಗಿತ್ತು. ಇದರಿಂದ ದಿನನಿತ್ಯದ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಇದೀಗ ಮತ್ತೆ ತೆರೆದಿರುವುದು ಸಾಕಷ್ಟು ಮಂದಿ ಸಂತಸದ ವಿಚಾರವಾಗಿದೆ. (ಏಜೆನ್ಸೀಸ್)