

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಅಲ್ಲಿನ ಸದನದಲ್ಲಿ ಭಾನುವಾರ ಆರಂಭಗೊಂಡಿದ್ದು, ಕೊನೆಗೂ ಪ್ರಧಾನಿ ಹಾಗೂ ವಿರೋಧಪಕ್ಷದ ನಾಯಕರ ಆಯ್ಕೆ ಅವಿರೋಧವಾಗಿ ನಡೆಯಿತು. ಶಹಬಾಜ್ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಗೊಂಡರು.
ಶಹಬಾಜ್ ಷರೀಫ್ ವಿರುದ್ಧ ಹಲವು ಆರೋಪಗಳ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಆಕ್ಷೇಪ ವ್ಯಕ್ತಪಡಿಸಿದ್ದರೂ, ನ್ಯಾಷನಲ್ ಅಸೆಂಬ್ಲಿಯ ಸಚಿವಾಲಯ ಅದನ್ನು ತಿರಸ್ಕರಿಸುವ ಮೂಲಕ ಆಯ್ಕೆ ಪೂರ್ಣಗೊಂಡಿತು.
ಮತ್ತೊಂದೆಡೆ ನ್ಯಾಷನಲ್ ಅಸೆಂಬ್ಲಿಗೆ ರಾಜೀನಾಮೆ ನೀಡಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನಾವು ಕಳ್ಳರೊಂದಿಗೆ ಅಸೆಂಬ್ಲಿಯಲ್ಲಿ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಶತಕೋಟಿಗಟ್ಟಲೆ ರೂಪಾಯಿ ಭ್ರಷ್ಟಾಚಾರ ಇರುವ ವ್ಯಕ್ತಿಯನ್ನು ಪ್ರಧಾನಿ ಆಗಿಸಿರುವುದು ದೇಶಕ್ಕೆ ದೊಡ್ಡ ಅವಮಾನ ಎಂದು ಹೇಳಿದ್ದಾರೆ.