ಶಹಭಾಷ್! ಇನ್ನು ನೀನು ಸುಮ್ನ ಕುಂಡ್ರಂಗಿಲ್ಲ...

Untitled design (4)
Published on

ಕುಟುಂಬದಲ್ಲಿ ನಾನು ಕೊನೆಯ ಮುದ್ದಿನ ಮಗಳು. ತಂದೆ ಸಂಗಮೇಶ್ವರ, ತಾಯಿ ಲೀಲಾವತಿ, ಸಹೋದರಿ ಶಶಿಕಲಾ, ಅಣ್ಣ ಕೈವಲ್ಯಕುಮಾರ, ನಂದಿಕೇಶ್ವರ ಎಲ್ಲರೂ ನೀಡಿದ ಪ್ರೀತಿ ಮರೆಯಲಾರದ್ದು. ಅಜ್ಜ ಗಣಪತರಾವ್ ಗುರವ ಜಮಖಂಡಿ ಸಂಸ್ಥಾನದಲ್ಲಿ ಆಸ್ಥಾನ ಗಾಯಕರಾಗಿದ್ದರು. ತಂದೆ ಅಪ್ರತಿಮ ಹಾಡುಗಾರರು. ಮನೆಗೆ ಬರುತ್ತಿದ್ದವರೆಲ್ಲ ಸಂಗೀತ ಲೋಕದ ದಿಗ್ಗಜರು. ಕುಮಾರ ಗಂಧರ್ವ, ಭೀಮಸೇನ ಜೋಶಿ ಮುಂತಾದವರು ಒಂದು ಕಡೆಯಾದರೆ, ಅಪ್ರತಿಮ ಸಂಗೀತಾಸಕ್ತರಾದ ಸದಾನಂದ ಕನವಳ್ಳಿ, ಅನಂತ ಹರಿಹರ ಇತರರು ಮತ್ತೊಂದು ಕಡೆ.

ಕೂತರೆ ನಿಂತರೆ ಸಂಗೀತವೇ. ಇದು ನನಗೆ ಬಾಲ್ಯದಲ್ಲಿಯೇ ಸಂಗೀತದ ರಸಗವಳ ನೀಡಿತು. ಅವರು ಹಾಡುತ್ತಿದ್ದ ಗಾಯನ ಕೇಳಕೋತ ಬೆಳೆದವಳು. ತಂದೆ ಸಂಗಮೇಶ್ವರ ಅವರು ಆಸಕ್ತಿಯಿಂದ ಅಣ್ಣ ಕೈವಲ್ಯನಿಗೆ ಒಂದು ಹೊತ್ತಿನಾಗ ಎಬ್ಬಿಸಿ, ಮುಂದ ಕೂಡ್ರಿಸಿಕೊಂಡು ಸಂಗೀತದ ಓನಾಮಗಳನ್ನು, ರಾಗದ ವಿಸ್ತಾರಗಳನ್ನು, ಪಟ್ಟುಗಳನ್ನು, ರಾಗ, ತಾಳ, ಲಯಗಳ ಸೊಗಸನ್ನು ಹೇಳಿಕೊಡುತ್ತಿದ್ದರೆ ಕಣ್ಣರಳಿಸಿ ಬೆರಗು ಮೂಡಿಸಿಕೊಂಡು ನಾನೂ ಕೇಳಿಸಿಕೊಳ್ಳುತ್ತಿದ್ದದ್ದು ಬಾಲ್ಯದಲ್ಲೇ ನನ್ನಲ್ಲಿ ಸಂಗೀತದ ರುಚಿಯನ್ನು ಮೂಡಿಸತೊಡಗಿತು. ಆದರೆ ‘ನನಗೂ ಕಲಿಸ್ರಲ್ಲ... ನಾನೂ ಹಾಡ ಹೇಳ್ತೇನಿ’ ಅಂತಾ ತಂದೆಯವರ ಎದುರು ನಿಂತು ಕೇಳುವ ಧೈರ್ಯ ನನಗಿದ್ದಿಲ್ಲ. ಶಿಸ್ತುಬದ್ಧವಾದ ಮನೆಯ ಸಂಸ್ಕೃತಿ, ಆಚಾರ-ವಿಚಾರಗಳು ಇದಕ್ಕೆ ಕಾರಣ ಇರಬೇಕು ಅನಸ್ತದ.

ಆದರೆ ಮನೆಗೆ ಬರುತ್ತಿದ್ದ ವೆಂಕಟೇಶಕುಮಾರ್, ಯಾದವಾಡ, ಉದಯ ದೇಸಾಯಿ ಅವರು ಪ್ರೀತಿಯಿಂದ, ‘ನೀನು ಯಾಕ್ ಸಂಗೀತ ಕಲಿವಲ್ಲೀ? ಬಾ ಇಲ್ಲಿ ಕೂತ್ಕೊ’ ಅಂತ ಹಾಡಾಕ ಕೂಡಿಸಿದರು. ಏನ್ ಹಾಡಿದೆನೋ, ಹೆಂಗ್ ಹಾಡಿದೆನೋ, ಅಪ್ಪ ಕೈವಲ್ಯಗ ಕಲಿಸೋ ಮುಂದ ಕೇಳಿಕೊಂಡು ಅರಗಿಸಿಕೊಂಡಿದ್ದ ಸಂಗೀತ ನನ್ನ ಬಾಲ್ಯದಲ್ಲೇ ಓತಪ್ರೋತವಾಗಿ ಹರಿಯಿತಲ್ಲ... ಅದನ್ನು ಮೆಚ್ಚಿ ಮೊದಲು ಬೆನ್ನು ತಟ್ಟಿದವರು ಪಂಡಿತ್ ವೆಂಕಟೇಶಕುಮಾರ್. ‘ಶಹಭಾಷ್ ಮಗಳ, ಇನ್ನು ನೀನು ಸುಮ್ಮನ ಕುಂಡ್ರಂಗಿಲ್ಲ, ಹಾಡಾಕೆ ಶುರೂ ಮಾಡು’ ಅಂದ್ರಲ್ಲ, ಆ ದಿನ ನನ್ನ ಪಾಲಿಗೆ ಬಂದ ಅದೃಷ್ಟದ ದಿನ ಅಂತ ಅನಸ್ತು. ‘ನಿಮ್ಮದು ಸಂಗೀತದ ಮನೆತನ, ಹೆದರಬ್ಯಾಡಾ, ನಾವದೇವೇ’ ಅಂತ ಅವರೆಲ್ಲ ಹೇಳಿ ನನಗೆ ಪ್ರೋತ್ಸಾಹ ನೀಡದೆ ಇದ್ದಿದ್ರೆ ನಾನು ಸಂಗೀತ ವಿದುಷಿ ಆಗ್ತಾನೆ ಇರಲಿಲ್ಲ!

ನನಗೆ ಆಗ ಹದಿನಾರು ಹದಿನೇಳರ ಪ್ರಾಯ. ಅಜ್ಜ, ಅಪ್ಪ, ಅಣ್ಣ, ಎಲ್ಲಾರನೂ ನೆನಿಸಿಕೊಂಡು ಸಣ್ಣದಾಗಿ ಲಘು ಸಂಗೀತ ಹಾಡಾಕ ಶುರೂ ಮಾಡಿದೆ. ವಚನಾ ಹಾಡು, ಠುಮರಿ ಹಾಡು, ಭಕ್ತಿಗೀತೆ, ಭಾವಗೀತೆ ಅಂತಾ ಹೇಳಿದ್ದನ್ನೆಲ್ಲ ಶ್ರದ್ಧೆಯಿಂದ ಮೈಯೆಲ್ಲ ತುಂಬಿಕೊಂಡು ಭಾವಪರವಶಳಾಗಿ ಹಾಡಾಕ ಹತ್ತಿದೆ, ಕೇಳಿದವರೆಲ್ಲ ಏನ್ ಛಂದ್ ಹಾಡ್ತಿಯಲ್ಲ ಹುಡುಗಿ ಅನ್ನಾಕತ್ತಿದರಲ್ಲ, ನಾ ಹಂಗಾರಛಂದ ಹಾಡೋದು ಕಲಿತೇನಿ ಅನಸಾಕತ್ತು. ಮಂದೀ ಬಾಯಿಂದ ಬಾಯಿಗೆ ಈ ಹುಡುಗಿ ಛಂದ ಹಾಡ್ತಾಳ ಅಂತ ಪ್ರಚಾರ ಆತು. ‘ನಮ್ಮ ಕಾರ್ಯಕ್ರಮ, ಸಭೆ, ಸಮಾರಂಭ ಆದಾವು ನೀನು ಹಾಡು ಬಾ’ ಅಂತಾ ಕರೀಯಾಕ್ ಹತ್ತಿದ್ದರಲ್ಲ, ನನ್ನಷ್ಟಕ್ಕ ನಾನು ನಂಬಲಾರದಂಗಾದೆ. ಇಷ್ಟೆಲ್ಲ ಆದರೂ ಅಪ್ಪನ ಕಿವಿತನಕ ಈ ಸುದ್ದಿ ಮುಟ್ಟಿರಲಿಲ್ಲ.

ಅದೊಂದು ದಿವಸ ಸಂಜೀಕ ಧಾರವಾಡದ ಕಲಾಭವನದಾಗ ಕಾರ್ಯಕ್ರಮ. ನನಗೂ ಹಾಡಾಕ ಕರೆದಿದ್ದರು. ಸ್ಟೇಜ್ ಮ್ಯಾಲ ಕೂತೆ, ಮೈಕ್ ಜೋಡಿಸಿದರು, ಅಕ್ಕಪಕ್ಕದಲ್ಲಿ ತಬಲಾ, ಹಾರ್ವೆನಿಯಮ್ ಸಾಥೀದಾರರು ಕುಳಿತರು, ಇನ್ನೇನು ಹಾಡಬೇಕು... ಎದುರಿನ ಕೇಳುಗರ ಸಾಲಿನಲ್ಲಿ ಅಪ್ಪ ಕುಳಿತಿದ್ದರು. ನನ್ನ ಜಂಘಾಬಲಾನೇ ಉಡುಗಿ ಹೋಯ್ತು. ನಾಲಗಿ ಒಣಗಿತು. ಅಷ್ಟರಾಗ, ಪಂಚಾಕ್ಷರಿ ಮತ್ತಿಗಟ್ಟಿ ಅವರು ಎದ್ದು ಬಂದು ನನ್ನ ಮಗ್ಗಲಕ ಕುಂತು ಕಿವಿಯಾಗ ಹೇಳಿದರು ‘ಮಗಳ ಹೆದರಬ್ಯಾಡ, ಎದುರಿಗೆ ನಿಮ್ಮ ಅಪ್ಪಾರು ಕುಂತಾರ ಅಂತಾ ಧೈರ್ಯ ಕಳಕೊಬ್ಯಾಡಾ, ನಾವ್ ಅದೇವಿ ಹಾಡು, ಛಂದ್ ಹಾಡತೀ ನಿನ್ನ ಅಜ್ಜ ಗಣಪತಿ ಹೆಸರು ತಗೊಂಡು ಕಣ್ಣುಮುಚ್ಚಿ ಹಾಡು’ ಅಂದ್ರಲ್ಲಾ. ಹೇಳ್ತೀನಿ ನೋಡ್ರಿ ಅದೆಲ್ಲಿತ್ತೊ ಧೈರ್ಯ ಮೈತುಂಬಿಕೊಂಡು ಕಣ್ಣು ಮುಚ್ಚಿ ಭಾವ ಪರವಶಳಾಗಿ ಅರ್ಧಗಂಟೆ ಹಾಡಿದೆ, ಹಾಡು ಮುಗಿಸಿದಾಗ ಪ್ರೇಕ್ಷಕರ ಅಪಾರ ಕರತಾಡನ, ಭರವಸೆಯ ಬೀಜ ಮೊಳೆತದ್ದೇ ಅವಾಗ. ಎದ್ದು ತಂದೆಯ ಬಳಿ ಸಾಗುತ್ತಿದ್ದೆ. ನನಗಿಂತಲೂ ಮೊದಲು ಅವರೇ ನನ್ನ ಬಳಿಗೆ ಬಂದು, ಬಿಗಿದಪ್ಪಿ ‘ಭಲೇ, ಏನ್ ಛಂದ ಹಾಡಿದಿ ಮಗಳೇ, ಇದೆಲ್ಲ ಎಲ್ಲಿ ಕಲಿತಿ? ಶಹಭಾಷ್’ ಅಂದರು. ಮುಂದೆ ಅವರಿಗೆ ಮಾತನಾಡಲಾಗದೇ ಕಣ್ಣು ತುಂಬಿಕೊಂಡರು. ನನ್ನ ತಲೆ ನೇವರಿಸಿದರು. ಅದು ನನ್ನ ಜೀವನದ ಸಾರ್ಥಕ್ಯದ ಪರಮಕ್ಷಣ.

ಮತ್ತೆ ನಾನು ಯಾವತ್ತೂ ಹಿಂತಿರುಗಿ ನೋಡಲಿಲ್ಲ. ಪಂಚಾಕ್ಷರಿ ಮತ್ತಿಗಟ್ಟಿ, ಸೋಮನಾಥ ಮರಡೂರ ಅವರು ನನಗೆ ‘ಇನ್ನು ನೀನು ಶಾಸ್ತ್ರೀಯ ಸಂಗೀತ ಹಾಡಾಕ ಶುರೂ ಮಾಡು, ನಿನ್ನ ಹಾಡುಗಾರಿಕೆಗೆ ಸಿರಿಕಂಠ ಹೇಳಿ ಮಾಡಿಸಿದಾಂಗ ಅದ’ ಎಂದು ಆಶೀರ್ವದಿಸಿದರು. ಪ್ರತಿದಿನ ರಿಯಾಜ ಶುರೂ ಮಾಡಿಕೊಂಡೆ. ತೃಪ್ತಿ ಆಗುವವರೆಗೆ ಹಾಡುತ್ತಿದ್ದೆ. ಹಾಡು ಹಾಡು ಅದೇ ಜೀವನವಾಯಿತು. ಹೊಸರಾಗವನ್ನು ಕಲಿತೆ, ಆರೋಹಣ, ಅವರೋಹಣ ರಾಗ, ತಾಳ ಲಯಗಳನ್ನು ಕರಗತ ಮಾಡಿಕೊಂಡೆ. ಹೊಸ ಹೊಸ ಚೀಜ್​ಗಳನ್ನು ಹುಡುಕಿಕೊಂಡೆ. ಶ್ರಮಪಟ್ಟು ಹಾಡುವುದು ಅಭ್ಯಾಸವಾಯಿತು. ನನಗೆ ಅರಿವಿಲ್ಲದೇ ನನ್ನ ಗಾಯನದಲ್ಲಿ ಶುದ್ಧತೆಗಳು, ಭಾವತರಂಗಗಳು ಮೂಡಿ ಶ್ರೋತೃಗಳು ವಾಹ್ ಅನ್ನತೊಡಗಿದಂತೆ, ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಸಂಯಮದಿಂದ, ಶಿಸ್ತಿನಿಂದ, ಜಾಗರೂಕಳಾಗಿ, ಹುಮ್ಮಸ್ಸಿನಿಂದ ಮೇಲೇರತೊಡಗಿದೆ. ಸುಗಮ ಸಂಗೀತದಿಂದ ಶಾಸ್ತ್ರೀಯ ಸಂಗೀತ ನನ್ನನ್ನು ಆವರಿಸಿಕೊಂಡಿತು.

ಆಕಾಶವಾಣಿಯ ನನ್ನ ಪ್ರಸ್ತುತಿಗಳು ನನ್ನನ್ನು ಎ ದರ್ಜೆಯ ಕಲಾವಿದೆಯನ್ನಾಗಿ ಗುರುತಿಸಿದವು. ನಾನು ಬೆಳೆಯುತ್ತಿದ್ದೇನೆ ಎನ್ನುವುದಕ್ಕಿಂತ ಕೇಳುಗರು ನನ್ನ ಹಾಡುಗಾರಿಕೆಯನ್ನು ಮೆಚ್ಚಿ ಬೆಳೆಸುತ್ತಿದ್ದಾರೆ ಎಂದು ವಿನಯಪೂರ್ವಕವಾಗಿ ನಂಬಿದ್ದೇನೆ. ಇದು ಸತ್ಯವೂ ಕೂಡ. ಅದೇನೇ ಇರಲಿ ತಂದೆಯವರು ನೀಡಿದ ಸಂಸ್ಕಾರ, ತಾಯಿಯ ಮಮತೆ, ಅಣ್ಣಂದಿರ ಮೆಚ್ಚುಗೆ ಒಂದು ಕಡೆಯಾದರೆ, ಮದುವೆಯಾದ ಮೇಲೆ ಪತಿ ಅಶೋಕ್, ನಮ್ಮ ಪ್ರೀತಿಯ ಕುಡಿಗಳಾದ ಮಗ ವೈಭವ್, ಮಗಳು ಪದ್ಮಶ್ರೀ ಎಲ್ಲರ ಪ್ರೀತಿ, ಪ್ರೋತ್ಸಾಹ ನಾನು ಬೆಳೆಯಲು ಕಾರಣವೆಂದೇ ಭಾವಿಸಿದ್ದೇನೆ.

ಇನ್ನು ಒಬ್ಬ ಹೆಣ್ಣುಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುವುದರ ಜೊತೆಗೆ ಬಗೆಬಗೆಯ ತಿಂಡಿ, ತಿನಿಸು ಆಹಾರವನ್ನು ತಯಾರಿಸಿ ಉಣಬಡಿಸುವುದು, ತಾಯಿ, ಅತ್ತೆ ಮಾವಂದಿರ ಯೋಗಕ್ಷೇಮ ನೋಡಿಕೊಳ್ಳುವುದು ನನಗೆ ಇಷ್ಟವಾದ ಸಂಗತಿಗಳೇ. ಸಂಸಾರದ ಸರಿಗಮದ ಜೊತೆಗೆ ಸಂಗೀತದ ಸರಿಗಮವೂ ಸೇರಿ ಜೀವನ ಪಾವನವಾಗಿದೆ.

ಮರೆಯಲಾಗದ ಅಪರೂಪದ ಎರಡು ಸಂಗತಿಗಳನ್ನು ಹೇಳದೇ ಹೋದರೆ ಮಾತು ಪೂರ್ಣವಾಗುವದಿಲ್ಲ. ಪಂಜಾಬಿನ ಪ್ರಸಿದ್ಧ ಗಾಯಕ ನಿಶಾತ್ ಸಿಂಗ್ ನನ್ನ ತಂದೆಯ ಬಳಿ ಐದು ವರ್ಷಗಳ ಕಾಲ ಅಭ್ಯಾಸ ಮಾಡಿದವರು. ಒಂದು ಸಾರಿ ಅಪ್ಪ ನಿಶಾತ್ ಅವರಿಗೆ ಸಂಗೀತ ಹೇಳಿಕೊಡುತ್ತಿದ್ದರು, ಅವರ ತೊಡೆಯ ಮೇಲೆ ನಾನು ಕುಳಿತಿದ್ದೆ. ಅಪ್ಪ ಮಾರವಾ ರಾಗ ಹೇಳಿ ಕೊಡುತ್ತಿದ್ದಾಗ ನಿಶಾತ್ ಅವರಿಗಿಂತ ಮೊದಲು ನಾನೇ ‘ರಿಷಭ’ ಹಚ್ಚಿದೆನಂತೆ. ಅದನ್ನು ಕೇಳಿದ ಅಪ್ಪ ‘ದೇಖೋ ನಿಶಾತ್, ಇತನೀ ಛೋಟಿ ಬೇಟಿ ರಿಷಭ ಗಾಯೀ ತೋ ಏಕ್ ದಿನ ಎ ಬಡಿ ಸಂಗೀತಗಾರ ಬನೇಗಿ, ಔರ್ ಬಹುತ ಅಚ್ಛಾ ಮಾರವಾ ಪೇಶ ಕರೇಗಿ’ ಅಂದಿದ್ರಂತ. ಪಂಜಾಬಿನಲ್ಲಿ ನಾನು ನಡೆಸಿಕೊಟ್ಟ ಕಛೇರಿಯಲ್ಲಿ ರಿಷಭ ತುಂಬಾ ಸರಿಯಾಗಿ ಹಚ್ಚಿದ್ದನ್ನು ಕೇಳಿದ ನಿಶಾತ್ ‘ವಾ ಖೂಬ್’ ಎಂದು ಹೇಳುತ್ತ ತಂದೆ ನನ್ನ ಬಗೆಗೆ ಹೇಳಿದ ಮಾತುಗಳನ್ನು ಮೆಲುಕು ಹಾಕಿದಾಗ ಪುಳಕಿತಳಾದೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದು ಇರಲಿಕ್ಕಿಲ್ಲ ಎಂದು ನಾನು ಭಾವಿಸಿದ ಕ್ಷಣವದು.

ನಸುಕಿನ ಸಮಯದಲ್ಲಿ ನಾನೊಂದು ಅದ್ಭುತವಾದ ಕನಸು ಕಂಡೆ. ನನ್ನ ತಂದೆ ತೀರಿ ಅದಾಗಲೇ ಮೂರು ತಿಂಗಳುಗಳಾಗಿದ್ದವು. ಕನಸಿನಲ್ಲಿ ನನ್ನ ತಲೆ ನೆೇವರಿಸಿದ ತಂದೆ, ‘ಮಗಳೇ ನಿನಗೆ ನಾನೇನೂ ಕೊಡಲೇ ಇಲ್ಲ, ತೆಗೆದುಕೋ’ ಎಂದು ನನ್ನ ಎರಡೂ ಅಂಗೈಗಳನ್ನು ಜೋಡಿಸಿ ಬೊಗಸೆಯಲ್ಲಿ ಸುರಿದರು. ಏಳು ವಜ್ರದ ಹರಳುಗಳು. ನಂಬದಾದೆ, ಅವು ಸಂಗೀತದ ಏಳು ಸ್ವರಗಳು, ಇವತ್ತಿಗೂ ನನಗೆ ವಿಚಿತ್ರ ಅದ್ಭುತವಾದ ಅನುಭವ. ನಾನು ಕಛೇರಿ ನಡೆಸುವಾಗ ನನ್ನ ತಂದೆ ಪಕ್ಕದಲ್ಲಿ ಕುಳಿತು ನನ್ನ ಸ್ವರದಲ್ಲಿ ಅವರು ಸ್ವರ ಕೂಡಿಸುತ್ತಾರೆ. ಸಂಗೀತ ಹೊರಹೊಮ್ಮುತ್ತದೆ. ಅದು ಕೇಳುಗರ ಮನಮುಟ್ಟುತ್ತದೆ ಎಂದರೆ ತಂದೆಯವರ ಅಲೌಕಿಕವಾದ ಆಶೀರ್ವಾದ ಅಲ್ಲದೇ ಇನ್ನೇನು ಇರಲು ಸಾಧ್ಯ?

ಇವತ್ತಿನ ಯುವಪೀಳಿಗೆಗೆ ನಾನು ಹೇಳುವುದಿಷ್ಟೆ, ಸಂಗೀತವನ್ನು ಆಸ್ವಾದಿಸಿ, ತಾಲೀಮ ಮಾಡಿ, ರಿಯಾಜ್ ಮಾಡಿ, ಸಂಗೀತ ಜ್ಞಾನದ ಪಟ್ಟುಗಳನ್ನು ಬಸಿದುಕೊಂಡು ಹಾಡಲು ಶುರು ಮಾಡಿ, ಹಾಡುತ್ತ ಹೋಗಿ, ಪ್ರಚಾರದ ಪ್ರಭಾವದ ಗೀಳು ಬಿಡಿ. ಸಂಗೀತ ನಿಮಗೆ ಒಲಿಯಿತೆಂದರೆ ಪ್ರಶಸ್ತಿ, ಪುರಸ್ಕಾರಗಳು ತಂತಾನೇ ಬೆನ್ನತ್ತಿ ಬರುತ್ತವೆ. ನಾನೆಂದೂ ಪ್ರಶಸ್ತಿಯ ಹಿಂದೆ ಬೀಳಲಿಲ್ಲ. ಪುಣೆಯ ಸುಪ್ರಸಿದ್ಧ ಮಾಣಿಕ ವರ್ವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ನನ್ನ ಮುಡಿಗೇರಿದ್ದರೂ ನಾನು ಸ್ಥಿತಪ್ರಜ್ಞಳಾಗಿರುವೆ, ಏಕೆಂದರೆ ನನ್ನ ಗುರಿ ಕೇವಲ ಸಂಗೀತ, ಅದೇ ನನ್ನ ಉಸಿರು. ಅದೇ ನನ್ನ ಬಾಳಿಗೆ ಹಸಿರು.

ನಿರೂಪಣೆ: ಶಶಿ ಸಾಲಿ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net