ರಾಜ್ಯ ಬಿಜೆಪಿ ಮತ್ತಷ್ಟು ಬಲಯುತಗೊಳಿಸಲು ಷಾ ತಂತ್ರ; ಮೂಲ ಬಿಜೆಪಿ ಸಚಿವರು, ಅಧಿಕಾರಿಗಳ ಮೇಲೆ ಅಸಮಾಧಾನ

Amit Shah
Published on

ಬೆಂಗಳೂರು: ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಂಘಟನೆಯ ಒಳ ಹೊರಗು ತಿಳಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷವನ್ನು ಇನ್ನಷ್ಟು ಚುರುಕುಗೊಳಿಸಲು ಕೆಲವೊಂದು ಟಾನಿಕ್ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ಮುಗಿದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರಗಿಟ್ಟು ತಮ್ಮದೇ ಆಪ್ತರ ಜತೆ ರಹಸ್ಯ ಸಭೆ ನಡೆಸಿದ ಸಂದರ್ಭದಲ್ಲಿ ಪಕ್ಷ ಹಾಗೂ ಸರ್ಕಾರವನ್ನು ಚುರುಕು ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ವರದಿಗೆ ಸೂಚನೆ: ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಿಂದ ಪಕ್ಷದ ಸಂಘಟನೆ ವಿಸ್ತಾರವಾಗಿದೆ ಎಂದು ರಾಜ್ಯ ನಾಯಕರು ನೀಡುವ ವರದಿಗಳನ್ನು ಷಾ ನಂಬಿದ್ದರೂ, ಸಂಘಟನೆ ಇನ್ನಷ್ಟು ವಿಸ್ತಾರವಾಗಬೇಕು ಹಾಗೂ ಸರ್ಕಾರ ಇನ್ನಷ್ಟು ಚುರುಕಾಗಬೇಕು ಎಂದೇ ಹೇಳಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ? ಸಂಘಟನೆ ಎಲ್ಲೆಲ್ಲಿ ಬಿಗಿ ಮಾಡಬೇಕಾಗಿದೆ? ಸರ್ಕಾರದ ಮಟ್ಟದಲ್ಲಿ ಏನೇನು ಕಾರ್ಯಕ್ರಮಗಳನ್ನು ಘೋಷಿಸಬೇಕಾಗಿದೆ? ಸಂಪುಟದಲ್ಲಿ ಆಗಬೇಕಾಗಿರುವ ಬದಲಾವಣೆಗಳೇನು? ಎಂಬ ಬಗ್ಗೆ ವರದಿ ನೀಡಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯಾಧ್ಯಕ್ಷ ನಳೀನ್​ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವ ಅರವಿಂದ ಲಿಂಬಾವಳಿ ಅವರಿಗೆ ಸೂಚನೆ ನೀಡಿದ್ದಾರೆಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ.

ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಗಳು ಸಂಘಟನೆಯ ಮೇಲೆ ಪರಿಣಾಮ ಬೀರಿವೆ, ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷಕ್ಕೂ ಹೆಚ್ಚಿನ ಕಾಲಾವಕಾಶವಿದೆ. ಆದ್ದರಿಂದ ಸಂಘಟನೆ ಕಡೆ ಸ್ವತಃ ತಾವೇ ಗಮನ ಹರಿಸಲಿದ್ದು ಏನೇನು ಮಾಡಬೇಕೆಂಬ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಮೂಲ ಸಚಿವರ ಬಗ್ಗೆ ಅಸಮಾಧಾನ: ವಲಸೆ ಬಂದು ಸಚಿವರಾಗಿರುವವರು ರಾಜ್ಯದ ತುಂಬಾ ಓಡಾಡುತ್ತ ಸರ್ಕಾರಕ್ಕೆ ಹೆಸರು ತರುತ್ತಿದ್ದಾರೆ. ಆದರೆ ನಮ್ಮದೇ ಪಕ್ಷದವರಿಗೆ ಏನಾಗಿದೆ? ಏಕೆ ಯಾರೊಬ್ಬರು ಎಲ್ಲಿಯೂ ಪ್ರವಾಸ ಮಾಡುತ್ತಿಲ್ಲ. ಇಲಾಖೆಗಳ ಕಡೆಗೂ ಏಕೆ ಗಮನ ಹರಿಸುತ್ತಿಲ್ಲ ಎಂದು ಷಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ವಲಸೆ ಬಂದವರಿಂದಾಗಿ ಸರ್ಕಾರದ ಮರ್ಯಾದೆ ಉಳಿದಿದೆ. ಮೊದಲು ಪಕ್ಷ ಮೂಲ ಸಚಿವರ ಕಾರ್ಯವೈಖರಿ ಸುಧಾರಿಸಬೇಕಾಗಿದೆ. ವರದಿ ಬಂದ ಕೂಡಲೇ ಆ ಕೆಲಸ ಪ್ರಾರಂಭಿಸುತ್ತೇನೆ ಎಂದು ಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರೆಂದು ಹೇಳಲಾಗಿದೆ. ಸಚಿವರ ಕಾರ್ಯವೈಖರಿಯ ಮೌಲ್ಯಮಾಪನವನ್ನು ಪಕ್ಷದ ಕಡೆಯಿಂದ ಮಾಡಬೇಕಾಗಿದೆ. ಈ ಬಗ್ಗೆಯೂ ಮಾಹಿತಿ ಇರಲಿ ಎಂದು ಷಾ ಸೂಚಿಸಿದ್ದಾರೆ.

ಅಧಿಕಾರಿಗಳ ಮಾಹಿತಿ: ಅಧಿಕಾರಿಗಳಲ್ಲಿಯೂ ಕೆಲವರ ಕಾರ್ಯ ನಿರ್ವಹಣೆ ಸರಿಯಾಗಿಲ್ಲ ಎಂಬ ಮಾಹಿತಿ ಈಗಾಗಲೇ ಕೇಂದ್ರಕ್ಕೆ ಬಂದಿದೆ. ಆ ಬಗ್ಗೆ ಸ್ವತಃ ತಾವೇ ಗಮನ ಹರಿಸುತ್ತೇನೆ. ಅಧಿಕಾರಿಗಳನ್ನು ಹೇಗೆ ಕಾರ್ಯ ನಿವೃಹಣೆಯಲ್ಲಿ ತೊಡಗಿಸಬೇಕೆಂಬುದು ತಮಗೆ ಗೊತ್ತಿದೆ. ಆ ಕೆಲಸ ಮಾಡುತ್ತೇನೆ ಎಂದು ಶಾ ತಿಳಿಸಿದರೆಂದು ಮೂಲಗಳು ಖಚಿತಪಡಿಸಿವೆ.

ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ: ಹಿರಿಯ ಸಚಿವರೊಂದಿಗೆ ರ್ಚಚಿಸಿ ಇನ್ನೆರಡು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಉಡುಪಿ ಪ್ರವಾಸದಲ್ಲಿರು ತ್ತೇನೆ. ಅಲ್ಲಿ ಕೃಷ್ಣನ ದರ್ಶನ ಪಡೆದು ವಾಪಾಸು ಬೆಂಗಳೂರಿಗೆ ಬರಲಿದ್ದೇನೆ. ಆನಂತರ ನೂತನ ಸಚಿವರಿಗೆ ಯಾವ ಖಾತೆ ನೀಡ ಬೇಕು ಎಂಬ ಕುರಿತು ಹಿರಿಯ ಸಚಿವರೊಂದಿಗೆ ರ್ಚಚಿಸುತ್ತೇನೆ.

ಇಂದು ಕೆಲ ಶಾಸಕರ ಸಭೆ

ದಾವಣಗೆರೆ: ಕೆಲ ಶಾಸಕರು ತಮ್ಮನ್ನು ಸಂರ್ಪಸಿ ನೋವು ತೋಡಿಕೊಂಡಿದ್ದಾರೆ. ಅವರ ಜತೆ ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ತಾವು ಅತೃಪ್ತರೂ ಅಲ್ಲ, ಬಂಡಾಯಗಾರರೂ ಅಲ್ಲ, ಯಾವುದೇ ತಂಡದ ಕ್ಯಾಪ್ಟನ್ ಅಲ್ಲ. ಪಕ್ಷ, ಸಂಘಟನೆ, ನಾಯಕತ್ವದ ವಿರುದ್ಧ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಲಸೆ ಸಚಿವರ ಮೆಚ್ಚಿದ ಷಾ

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್​ನಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವವರ ಕಾರ್ಯವೈಖರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಶ್ಲಾಘಿಸಿದ್ದಾರೆ. ‘ಅವರೆಲ್ಲರೂ ರಾಜ್ಯದ ತುಂಬ ಓಡಾಡುತ್ತಾ ಸರ್ಕಾರಕ್ಕೆ ಹೆಸರು ತರುತ್ತಿದ್ದಾರೆ. ಅವರಿಂದ ಸರ್ಕಾರದ ಮರ್ಯಾದೆ ಉಳಿದಿದೆ. ಆದರೆ ಪಕ್ಷ ಮೂಲದ ಸಚಿವರು ಪ್ರವಾಸವನ್ನೂ ಕೈಗೊಳ್ಳದೆ, ಇಲಾಖೆಗಳ ಕಡೆಗೂ ಗಮನ ಹರಿಸದಿರುವುದು ಏಕೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಸಚಿವರ ಕಾರ್ಯವೈಖರಿ ಸುಧಾರಿಸಲು ಮೌಲ್ಯಮಾಪನ ಮಾಡುವುದಾಗಿ ಅಮಿತ್ ಷಾ ಹೇಳಿರುವರೆಂದು ಉನ್ನತ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net