

ಮುಂಬೈ: ನಿಜಕ್ಕೂ ಶಾರುಖ್ ಖಾನ್ಗೆ ಅಂಥದ್ದೊಂದು ಯಶಸ್ಸು ಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಪೂರ್ಣಪ್ರಮಾಣ ನಾಯಕನಾಗಿ ಅಭಿನಯಿಸಿದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಅದಕ್ಕೂ ಮುನ್ನ, ಮಾಡಿದ ಚಿತ್ರ ಯಾವುದೂ ಗೆದ್ದಿರಲಿಲ್ಲ. ಹಾಗಾಗಿ, ಶಾರುಖ್ ಖಾನ್ ಒಂದು ಯಶಸ್ಸಿಗಾಗಿ ಹಾತೊರೆಯುತ್ತಿದ್ದರು. ಆ ಯಶಸ್ಸು ಇದೀಗ 'ಪಠಾಣ್' ಚಿತ್ರದ ಮೂಲಕ ಸಿಕ್ಕಿದೆ.
'ಪಠಾಣ್' ಚಿತ್ರವು ಕಳೆದ ಬುಧವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರವು 500 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಖಾನ್ಗೆ ದೊಡ್ಡ ಯಶಸ್ಸು ನೀಡಿದೆ. ಕಳೆದ ನಾಲ್ಕು ದಿನಗಳಲ್ಲಿ ಹಿಂದಿನ ನಾಲ್ಕು ವರ್ಷಗಳನ್ನು ಮರೆತಿರುವುದಾಗಿ ಶಾರುಖ್ ಖಾನ್ ಹೇಳಿದ್ದಾರೆ.
ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡದವರು, ಸೋಮವಾರ ಮುಂಬೈನಲ್ಲಿ ಸಂತೋಷ ಕೂಟವೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಶಾರುಖ್, 'ಕಳೆದ ನಾಲ್ಕು ದಿನಗಳಲ್ಲಿ ನಾನು ನಾಲ್ಕು ವರ್ಷಗಳನ್ನು ಮರೆತಿದ್ದೇನೆ. ನಾನು ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಭೇಟಿ ಮಾಡಲೇ ಇಲ್ಲ. ಈ ಸಮಯದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಕೋವಿಡ್ ನಡುವೆಯೇ ಚಿತ್ರೀಕರಣ ಮಾಡಿದ್ದೇವೆ. ಆ ನಂತರ ಒಂದಿಷ್ಟು ವಿವಾದಗಳಿಂದ ಚಿತ್ರಕ್ಕೆ ಸಮಸ್ಯೆಯಾದರೂ ಚಿತ್ರ ಬಿಡುಗಡೆಯಾಗಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ನಮಗೆ ಎಲ್ಲ ಕಡೆಯಿಂದ ಪ್ರೀತಿ ಸಿಕ್ಕಿದೆ. ಧನ್ಯವಾದಗಳನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಸಿನಿಮಾಗೆ ಜೀವ ತುಂಬಿದ್ದಕ್ಕಾಗಿ ಇಡೀ ಚಿತ್ರರಂಗದ ಪರವಾಗಿ ನಾನು ಧನ್ಯವಾದಗಳನ್ನು ಹೇಳುತ್ತೇನೆ' ಎಂದು ಶಾರುಖ್ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳ ಕುರಿತು ಮಾತನಾಡಿರುವ ಅವರು, 'ಈ ನಾಲ್ಕು ವರ್ಷಗಳಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನೂ ನೋಡಿದ್ದೇನೆ. ಮಕ್ಕಳ ಜತೆಗೆ ಕಾಲ ಕಳೆದಿದ್ದೇನೆ. ಅವರು ಬೆಳೆಯುವುದನ್ನು ನೋಡಿದ್ದೇನೆ. ನನ್ನ ಹಿಂದಿನ ಚಿತ್ರ ಫ್ಲಾಪ್ ಆಗಿತ್ತು. ನನ್ನ ಚಿತ್ರಗಳು ಗೆಲ್ಲುವುದಿಲ್ಲ ಎಂದು ಜನ ಹೇಳಿದ್ದರು. ಆಗ ಪರ್ಯಾಯ ವೃತ್ತಿಯ ಬಗ್ಗೆ ಯೋಚಿಸಿದ್ದೆ. ಇಟಾಲಿಯನ್ ಅಡುಗೆ ಮಾಡುವುದನ್ನು ಕಲಿತೆ' ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ ಶಾರುಖ್.