

ಮಂಗಳೂರು: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಿಗ್ಬಾಸ್ ಸೀಸನ್ 9 (Bigg boss season 9)ರ ಸ್ಫರ್ಧಿ ಹಾಗೂ ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟಿ ಮತ್ತು ಮಾಡೆಲ್ ಸಾನ್ಯ ಅಯ್ಯರ್ (Actress Sanya Iyer) ಅವರು ಯುವಕನೊಬ್ಬನ ಜೊತೆ ಕಿತ್ತಾಡುವ ಮೂಲಕ ವಿವಾದ(Controversy)ವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೋಟಿ-ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಸಾನ್ಯ ಅತಿಥಿಯಾಗಿ ಬಂದಿದ್ದರು. ಅದೇ ದಿನ ಮದ್ಯರಾತ್ರಿ ಸ್ನೇಹಿತರೊಡನೆ ಮತ್ತೆ ಕಂಬಳ ವೀಕ್ಷಣೆಗೆ ಸಾನ್ಯ ಆಗಮಿಸಿದ್ದರು.
ಕಂಬಳ ವೀಕ್ಷಣೆ ಮಾಡುವ ವೇಳೆ ಯುವಕನೊಬ್ಬ ಸೆಲ್ಫಿ ತೆಗೆಯುವಾಗ ಸಾನ್ಯ ಮತ್ತು ಸ್ನೇಹಿತೆಯರ ಕೈ ಹಿಡಿದು ಎಳೆದಿರುವ ಆರೋಪ ಮಾಡಲಾಗಿದೆ. ಕೈ ಹಿಡಿದು ಎಳೆದಿದ್ದರಿಂದ ಆಕ್ರೋಶಗೊಂಡ ಸಾನ್ಯ ಅಲ್ಲಿಯೇ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕನು ಕೂಡ ಸಾನ್ಯ ಕೆನ್ನೆಗೆ ಬಾರಿಸಿದ್ದಾನೆ. ಇದರ ಬೆನ್ನಲ್ಲೇ ಸ್ಥಳೀಯ ಆಟೋ ಚಾಲಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.
ಈ ಘಟನೆಯಿಂದ ಬೇಸರಗೊಂಡ ಸಾನ್ಯ ಮತ್ತು ಆಕೆಯ ಸ್ನೇಹಿತರು ಕಂಬಳ ಆಯೋಜಕರನ್ನು ತರಾಟೆ ತೆಗೆದುಕೊಂಡರು. ಒಬ್ಬ ಹೆಣ್ಣಮಗಳ ಜೊತೆ ಈ ರೀತಿ ನಡೆದುಕೊಳ್ಳುತ್ತಾರಾ? ಆತ ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ ಎಂದು ವೇದಿಕೆಯ ಮೇಲೆಯೇ ಸಾನ್ಯ, ಸ್ನೇಹಿತೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಸಾನ್ಯ ಕೂಡ ಏರು ಧ್ವನಿಯಲ್ಲಿ ಘಟನೆಯನ್ನು ಖಂಡಿಸಿದರು. ಕೆಲ ಕಾಲ ವೇದಿಕೆಯಲ್ಲಿ ಭಾರಿ ಗದ್ದಲು ನಡೆಯಿತು. ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ, ಸಾನ್ಯ ಮತ್ತು ಆಕೆಯ ಸ್ನೇಹಿತರನ್ನು ಸಮಾಧಾನಪಡಿಸಿದರು. (ದಿಗ್ವಿಜಯ ನ್ಯೂಸ್)