ಜಿಲ್ಲಾ ಘಟಕದ ಚುನಾವಣೆಯಲ್ಲೂ ಷಡಾಕ್ಷರಿ ಬಣ ಮೇಲುಗೈ

sarkari
Published on

ಬೆಂಗಳೂರು: ಸರ್ಕಾರಿ ನೌಕರರ ಸಂಘದ ಚುನಾವಣೆ ಕೊನೆಯಘಟ್ಟ ತಲುಪಿದ್ದು, ಡಿಸೆಂಬರ್ 9ರಿಂದ ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಡಿ.27ರಂದು ಮತದಾನ ನಡೆಯುವುದು.

ತಾಲೂಕು ಘಟಕ, ಜಿಲ್ಲಾ ಘಟಕ, ಬೆಂಗಳೂರು ನಗರ ಘಟಕದಿಂದ 950 ಮಂದಿ ಕೇಂದ್ರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ.

ಬುಧವಾರ ಜಿಲ್ಲಾ ಶಾಖೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ರಾಜ್ಯಾಧ್ಯಕ್ಷ ಷಡಾಕ್ಷರಿ ಬಳಿ ಮೇಲುಗೈ ಸಾಧಿಸಿದೆ. ನವೆಂಬರ್ 27ರಂದು 13 ಜಿಲ್ಲೆಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು, ಉಳಿದ 18 ಜಿಲ್ಲಾ ಶಾಖೆಗಳಿಗೆ ಬುಧವಾರ ಮತದಾನ ನಡೆದಿತ್ತು.

31 ಜಿಲ್ಲಾ ಶಾಖೆಗಳ ಪೈಕಿ 27 ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ 102 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 95 ಸ್ಥಾನಗಳಲ್ಲಿ ನಮ್ಮ ಬಳಗ ಜಯಭೇರಿ ಭಾರಿಸಿದೆ ಎಂದು ಹಾಲಿ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿಕೊಂಡಿದ್ದಾರೆ.

ಹಿಂದಿನ ಅವಧಿಯಲ್ಲಿ ನಮ್ಮ ತಂಡ ಮಾಡಿರುವ ಕೆಲಸವನ್ನು ರಾಜ್ಯದ ಸರ್ಕಾರಿ ನೌಕರರ ಗುರುತಿಸಿ ನಮ್ಮ ತಂಡಕ್ಕೆ ಆಶೀರ್ವದಿಸಿದ್ದಾರೆ. ಆ ಕಾರಣದಿಂದ ಇಷ್ಟೊಂದು ಸಂಖ್ಯೆಯಲ್ಲಿ ನಮ್ಮ ಬಣದ ಪದಾಧಿಕಾರಿಗಳು ಆಯ್ಕೆಯಾಗಲು ಸಾಧ್ಯವಾಗಿದೆ. ಮುಂದೆಯೂ ಸಹ ಸರ್ಕಾರಿ ನೌಕರರು ನಮ್ಮ ಮೇಲೆ ಇಟ್ಟಿರುವ ಭರವಸೆ ಹಾಗೂ ವಿಶ್ವಾಸ ಉಳಿಸಿಕೊಳ್ಳುವ ಪ್ರಾಮಾಣಿಕ ಜವಾಬ್ದಾರಿ ನಮ್ಮ ತಂಡದ್ದಾಗಿದೆ ಎಂದು ಷಡಾಕ್ಷರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net