ಶಂ.ಭಾ.ಜೋಶಿ ನೆಲ ಮೂಲ ಸಂಸ್ಕೃತಿಯ ಆಕರಗಳ ಸಂಶೋಧಕ

sahyadri
ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ಶಂ.ಭಾ. ಸಂಸ್ಕೃತಿ, ಸಂಶೋಧನೆ, ಮರು ಚಿಂತನೆ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಪ್ರೊ.ಡಿ.ವಿ.ಪರಶಿವಮೂರ್ತಿ ಉದ್ಘಾಟಿಸಿದರು. ಡಾ. ಸೈಯದ್ ಸನಾವುಲ್ಲಾ, ಪ್ರೊ. ರಾಜೇಂದ್ರ ಚೆನ್ನಿ, ಡಾ. ಟಿ.ಅವಿನಾಶ್ ಇತರರಿದ್ದರು.
Published on

ಶಿವಮೊಗ್ಗ: ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಗೆ ಹೊಸ ಆಯಾಮ ಕೊಟ್ಟವರು ಶಂ.ಭಾ.ಜೋಶಿ. ಅವರನ್ನು ಆಕರಗಳ ಸಂಶೋಧಕ ಎಂದೇ ಕರೆಯಲಾಗುತ್ತದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಡಿ.ವಿ.ಪರಶಿವಮೂರ್ತಿ ಹೇಳಿದರು.

ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಶಂ.ಭಾ. ಸಂಸ್ಕೃತಿ, ಸಂಶೋಧನೆ, ಮರು ಚಿಂತನೆ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಶಂ.ಭಾ.ಜೋಶಿ ನೆಲ ಮೂಲ ಸಂಸ್ಕೃತಿಯ ಆಕರಗಳ ಸಂಶೋಧಕ ಎಂದು ಅಭಿಪ್ರಾಯಪಟ್ಟರು.

ಕಣ್ಮರೆಯಾಗುತ್ತಿರುವ ಆಕರಗಳನ್ನು ನಮ್ಮ ಮುಂದಿಟ್ಟು ವಸಾಹತು ಕಾಲದ ಸಂಶೋಧನೆ ಬಗ್ಗೆ ಭಿನ್ನವಾಗಿ ಚಿಂತಿಸುವ ಜತೆಗೆ ಶಾಸ್ತ್ರೀಯ ಮಾರ್ಗದ ಮೂಲಕ ಸಂಶೋಧನೆಗೆ ಒಂದು ವ್ಯವಸ್ಥಿತ ರೂಪ ಕೊಟ್ಟವರು ಶಂ.ಭಾ.ಜೋಶಿ. ಸಮುದಾಯಗಳ ಅಧ್ಯಯನ ಮಾಡುತ್ತಿದ್ದ ಶಂ.ಭಾ. ಪ್ರತ್ಯಕ್ಷ ಆಕರದ ಜತೆಗೆ ಅಪ್ರತ್ಯಕ್ಷ ಆಕರಗಳನ್ನು ಹೊಸದಾಗಿ ಶೋಧಿಸಿದವರು. ಹೊಸ ಹೊಸ ದಿಕ್ಕಿನತ್ತ ವಿಮರ್ಶೆಯ ಅರಿವನ್ನು ವಿಸ್ತರಿಸಿ ಸಿದ್ಧ ಮಾದರಿಯ ಬದಲಾಗಿ ಸೃಜನಶೀಲತೆ ಸೃಷ್ಟಿಸಿದವರು. ನಮ್ಮ ಇಂದಿನ ಯುವ ಸಂಶೋಧಕರು ಶಂ.ಭಾ. ಅವರ ದೃಷ್ಟಿಕೋನಗಳತ್ತ ಮುಖಾಮುಖಿಯಾಗಬೇಕು. ಹಾಗಾದಾಗ ಸಂಶೋಧನೆಯ ಫಲಿತಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ ಎಂದರು.

ಆಶಯ ಭಾಷಣ ಮಾಡಿದ ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ, ನಮ್ಮ ಸಂಶೋಧನೆಗಳು ಮತ್ತಷ್ಟು ವಿಸ್ತಾರವಾಗಬೇಕಾಗಿದೆ. ಭಾರತೀಯ ನಾಗರಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ಶಿಸ್ತಿನ ಕಲಿಕೆಯನ್ನು ಬಳಸಿಕೊಳ್ಳಬೇಕು. ಜಗತ್ತಿನ ವಿಮರ್ಶಕರ ಚಿಂತನೆಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ನಿನ್ನೆಗಳನ್ನು ಹಾಗೆಯೇ ಉಳಿಸಬಾರದು. ನಿನ್ನೆಗಳ ಜತೆಗೆ ಇಂದು ಏನು ಸಂಬಂಧವಿದೆ ಎಂಬುದೇ ಸಂಶೋಧನೆಯ ಮುಖ್ಯ ಮಾರ್ಗವಾಗುತ್ತದೆ. ಜಗತ್ತಿನ ಪಶ್ಚಿಮದ ಸಂಶೋಧಕರು ಎರಡು ರೀತಿಯಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಜ್ಞಾನದ ಮೂಲಕ ಅಥವಾ ಸೌರ ಆಧಾರಿತ ಪ್ರಜ್ಞೆ ರಹಿತ ಇಲ್ಲವೇ ಚಂದ್ರ ಆಧಾರಿತ ಸಂಶೋಧನೆಗಳೆಂದು ಅವುಗಳನ್ನು ಕರೆಯುತ್ತಾರೆ. ವೈಚಾರಿಕತೆ ಮತ್ತು ನಿಷ್ಕಲ್ಮತೆ ಸಂಶೋಧನೆಗೆ ಮುಖ್ಯವಾಗುತ್ತದೆ. ಶಂ.ಭಾ. ಅವರು ತಮ್ಮ ಜೀವನವಿಡಿ ಪ್ರಜ್ಞೆಯ ಆಧಾರದ ಮೇಲೆ ಸಂಶೋಧನೆ ಕೃತಿಗಳನ್ನು ಬರೆದಿದ್ದಾರೆ ಎಂದರು.

ಭಾಷೆ, ಸಂಸ್ಕೃತಿ, ಆಚರಣೆಯ ಸುತ್ತ ಅವರ ಸಂಶೋಧನೆಗಳನ್ನು ಕಾಣಬಹುದು. ಬ್ರಿಟಿಷ್ ಮಾದರಿಯ ಸಂಶೋಧನೆಯನ್ನು ಅವರು ಒಪ್ಪುತ್ತಿರಲಿಲ್ಲ. ಹಾಗೆಯೇ ಪುರಾಣಗಳನ್ನು ಸಂಕೇತವಾಗಿಟ್ಟುಕೊಂಡು ಅದರಲ್ಲಿರುವ ಆಶಯಗಳನ್ನು ಚರಿತ್ರೆಯ ಪಕ್ಕಕ್ಕಿಟ್ಟು ನೋಡಿದ್ದರು ಎಂದು ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಸೈಯದ್ ಸನಾವುಲ್ಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಅವಿನಾಶ್, ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net