

ಅಮೃತಸರ: ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ, ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಬಂಧನಕ್ಕಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಿರುವ ಸಿಖ್ ಸಮುದಾಯದ ಯುವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
SGPC ಮುಖ್ಯ ಕಚೇರಿ ಇಂದ ಶುರುವಾದ ಪ್ರತಿಭಟನಾ ರ್‍ಯಾಲಿಯೂ ಅಮೃತಸರ ಜಿಲ್ಲಾಡಳಿತ ಕಚೇರಿವರೆಗೂ ಸಾಗಿತ್ತು. ಸಮಿತಿ ಸದಸ್ಯರು ಬಂಧಿಸಿರುವ ಯುವಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಹೆಚ್ಚುವರಿ ಉಪ ಆಯುಕ್ತ ಸುರಿಂದರ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಅಮೃತ್ಪಾಲ್ ಸಿಂಗ್ ಬಂಧನಕ್ಕಾಗಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಕೆಲವು ಯುವಕರ ಮೇಲೆ ಭಾರತ ದಂಡ ಸಂಹಿತೆ 751 ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆ(NSA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕೂಡಲೇ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ SGPC ಸಮಿತಿ ಸದಸ್ಯರು ಉಪ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ಬಂಧಿಸಿದ್ದ 360 ಜನ ಯುವಕರ ಪೈಕಿ 348 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.