

ಬೆಂಗಳೂರು: ಮನೆಗೆ ಟಿವಿ ನೋಡಲು ಬಂದಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ 1ನೇ ನ್ಯಾಯಾಲಯ ತೀರ್ಪು ನೀಡಿದೆ.
ಪೀಣ್ಯದ ವೆಂಕಟೇಶ್ (38) ಎಂಬಾತ ಅಪರಾಧಿ. ಐದು ವರ್ಷ ಜೈಲು ಶಿಕ್ಷೆ ಮತ್ತು 35 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎನ್. ಎಂ. ರಮೇಶ್ ಅವರು ಶಿಕ್ಷೆ ವಿಧಿಸಿದ್ದಾರೆ. ಜತೆಗೆ ನೊಂದ ಬಾಲಕಿಗೆ ಪರಿಹಾರವಾಗಿ 1.50 ಲಕ್ಷ ರೂ. ನೀಡಬೇಕೆಂದು ಸೂಚಿಸಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ, ನೊಂದ ಬಾಲಕಿ ಪರ ವಾದ ಮಂಡಿಸಿದ್ದರು.
ಎಂಟು ವರ್ಷದ ಬಾಲಕಿ, ಪಾಲಕರ ಜತೆಗೆ ನೆಲೆಸಿದೆ. 2019ರ ಡಿ.22ರ ರಾತ್ರಿ 8 ಗಂಟೆಯಲ್ಲಿ ನೊಂದ ಬಾಲಕಿ, ಟಿವಿ ನೋಡುವ ಸಲುವಾಗಿ ಅಪರಾಧಿ ಮನೆಗೆ ಹೋಗಿದೆ. ಆಗ ಆಕೆಯನ್ನು ಹಿಡಿದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದ. ನೋವಿನಲ್ಲಿ ಬಾಲಕಿ, ಅಳುತ್ತ ಮನೆಗೆ ಹೋಗಿ ಪಾಲಕರೊಂದಿಗೆ ನೋವು ಹಂಚಿಕೊಂಡಿತ್ತು. ಈ ಬಗ್ಗೆ ನೊಂದ ಪಾಲಕರು ಕೊಟ್ಟ ದೂರಿನ ಮೇರೆಗೆ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೆಂಕಟೇಶ್‌ನ್ನು ಬಂಧಿಸಿ ಜೈಲಿಗೆ ಕಳುಹಿಸಿ ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ಪ್ರಕಟಿಸಿದೆ.