ಕಾಲುಬಾಯಿ ಜ್ವರ ಲಸಿಕೆಗೆ ತೀವ್ರ ಬರ; ಕೇಂದ್ರದತ್ತ ಮುಖಮಾಡಿದ ರಾಜ್ಯ, ಜಾನುವಾರು ಸಾವುನೋವು ಹೆಚ್ಚುವ ಆತಂಕ

Kalu Bai
Published on

| ಶಿವಾನಂದ ತಗಡೂರು ಬೆಂಗಳೂರು

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ರೈತ ಸಮುದಾಯ ಆತಂಕಕ್ಕೀಡಾಗಿದೆ.

ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ರಾಸುಗಳಿಗೆ ಪ್ರತಿವರ್ಷ ಮೇ-ಜೂನ್​ನಲ್ಲಿ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದಿಂದ ನಡೆಯುವ ಲಸಿಕಾ ಕಾರ್ಯಕ್ರಮ ಪ್ರತಿ ವರ್ಷವೂ ಯಶಸ್ವಿಯಾಗಿ ನಡೆಯುತ್ತಲೇ ಬಂದಿದೆ. ಆದರೆ, ಈ ಬಾರಿ ಕೋವಿಡ್ ಎಫೆಕ್ಟ್​ನಿಂದಾಗಿ ನಿಗದಿತ ಸಮಯದಲ್ಲಿ ಲಸಿಕೆ ಕೇಂದ್ರದಿಂದ ರಾಜ್ಯಕ್ಕೆ ಸರಬರಾಜಾಗದೆ ಸಮಸ್ಯೆ ಎದುರಾಗಿದೆ. ಇತ್ತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ, ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಲಸಿಕೆ ಕೊರತೆ ತೀವ್ರವಾಗಿದ್ದು, ಶೀಘ್ರ ಕೇಂದ್ರದಿಂದ ಪೂರೈಕೆಯಾಗದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಲುಪುವ ಆತಂಕ ಕಾಡುತ್ತಿದೆ.

ಪರಿಣಾಮಗಳೇನು?: ಕಾಲುಬಾಯಿ ಜ್ವರ ಸಾಂಕ್ರಾಮಿಕವಾಗಿದ್ದು, ಕಡಿಮೆ ಸಮಯದಲ್ಲಿಯೇ ಜಾನುವಾರುಗಳಿಗೆ ವ್ಯಾಪಿಸುತ್ತದೆ. ರೋಗಕ್ಕೆ ಕರುಗಳು ತಕ್ಷಣವೇ ಬಲಿಯಾಗುತ್ತವೆ. ಗರ್ಭಧಾರಣೆ ಆಗದೆ ಇರುವುದು, ಗರ್ಭ ನಿಲ್ಲದೆ ಹೋಗುವುದು, ದೀರ್ಘಾವಧಿ ನಿಶ್ಯಕ್ತಿ ಕಾಡುವುದು ಸೇರಿ ಹತ್ತು ಹಲವು ಸಮಸ್ಯೆಗಳು ತೀವ್ರವಾಗಿ ಕಾಡುತ್ತವೆ.

50 ಲಕ್ಷ ಲಸಿಕೆಗೆ ಬೇಡಿಕೆ: ರಾಜ್ಯಕ್ಕೆ ಸದ್ಯ ಕನಿಷ್ಠ 50 ಲಕ್ಷ ಲಸಿಕೆ ಅಗತ್ಯವಿದ್ದು, ಮೊದಲ ಹಂತದಲ್ಲಿ ಲಸಿಕೆ ಪೂರೈಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗಿದೆ. ರಾಜ್ಯದ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈಗ ಮೊದಲ ಹಂತದಲ್ಲಿ 25 ಲಕ್ಷ ಲಸಿಕೆಗಳನ್ನು ಕಳುಹಿಸಿಕೊಡಲು ಕ್ರಮ ಕೈಗೊಂಡಿದೆ. ಎರಡನೇ ಹಂತದಲ್ಲಿ ಇನ್ನು 27 ಲಕ್ಷ ಲಸಿಕೆಗಳನ್ನು ಕಳುಹಿಸುವ ಭರವಸೆ ನೀಡಿದೆ.

ಕೇಂದ್ರದಿಂದ ಕಾಲುಬಾಯಿ ರೋಗಕ್ಕೆ ಮೊದಲನೇ ಹಂತದಲ್ಲಿ 25 ಲಕ್ಷ ಡೋಸ್ ಪೂರೈಕೆ ಆಗಲಿದೆ. ಅದನ್ನು ಬಳ್ಳಾರಿ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಹಾಗೂ ಚಿತ್ರದುರ್ಗಕ್ಕೆ ನೀಡಲಾಗುವುದು. ಎರಡನೇ ಹಂತದಲ್ಲಿ 27 ಲಕ್ಷ ಡೋಸ್ ಪೂರೈಕೆ ಆಗುವ ನಿರೀಕ್ಷೆ ಇದ್ದು, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಆದ್ಯತೆ ಮೇಲೆ ನೀಡಲಾಗುತ್ತಿದೆ.

| ಪ್ರಭು ಚವ್ಹಾಣ್ ಪಶುಸಂಗೋಪನೆ ಸಚಿವ

ಸಚಿವರಿಗೆ ನೊಂದ ರೈತರ ಕರೆ: ಕಾಲುಬಾಯಿ ಜ್ವರಕ್ಕೆ ಕೂಡಲೇ ಔಷಧ ಕೊಡಿಸಬೇಕು ಎಂದು ಹಲವು ಜಿಲ್ಲೆಗಳ ರೈತರು ದೂರವಾಣಿ ಮೂಲಕ ಸಚಿವರನ್ನು ಸಂಪರ್ಕ ಮಾಡಿದ್ದಾರೆ. ರೋಗದಿಂದ ಜಾನುವಾರುಗಳು ನರಳುತ್ತಿರುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ರೈತರ ಮಾತುಗಳನ್ನು ಆಲಿಸಿರುವ ಸಚಿವರು, ಇಲಾಖೆಯಲ್ಲಿ ಲಭ್ಯವಿರುವ ಲಸಿಕೆಯನ್ನು ಕೂಡಲೆ ನೀಡಬೇಕು ಎಂದು ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

25ರಿಂದ ಅಭಿಯಾನ?: ಲಸಿಕೆ ಇಲ್ಲದೆ ಜಾನುವಾರುಗಳಲ್ಲಿ ಪ್ರತಿರೋಧ ಶಕ್ತಿ ಕುಗ್ಗುತ್ತಿದೆ. ಅ.25ರಿಂದ ಸಾರ್ವತ್ರಿಕ ಲಸಿಕಾ ಅಭಿಯಾನಕ್ಕೆ ಸಿದ್ಧತೆ ಕೈಗೊಳ್ಳುವಂತೆ ಮೇಲಧಿಕಾರಿಗಳು ಸೂಚಿಸಿದ್ದು, ಲಸಿಕೆ ಬಂದ ತಕ್ಷಣ ಅಭಿಯಾನ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 25ರವರೆಗೆ ಅಭಿಯಾನ ನಡೆಯಲಿದೆ.

ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ?

  • ಬಾಗಲಕೋಟೆಯಲ್ಲಿ ನಿತ್ಯ 4-5 ಜಾನುವಾರುಗಳು ರೋಗಕ್ಕೆ ತುತ್ತಾಗುತ್ತಿದ್ದು, ಪಶು ಸಂಗೋಪನೆ ಇಲಾಖೆ ಸ್ವಂತ ಖರ್ಚಿನಿಂದ 20 ಸಾವಿರ ಡೋಸ್ ಆಮದು ಮಾಡಿಕೊಂಡಿದೆ. ಅಗತ್ಯವಿರುವ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೋಗ ಲಕ್ಷಣವಿರುವ ರಾಸುಗಳಿಗೆ ಲಭ್ಯವಿರುವಷ್ಟೆ ಲಸಿಕೆ ನೀಡುತ್ತಿದೆ. ಕೆಲವು ಗ್ರಾಮಗಳಲ್ಲಿ ಖಾಸಗಿಯಾಗಿ ಲಸಿಕೆ ಖರೀದಿಸಲಾಗುತ್ತಿದೆ, ಕೆಲವರು ನಾಟಿ ಔಷಧ ಮೊರೆಹೋಗುತ್ತಿದ್ದಾರೆ.
  • ಕೊಡಗಲ್ಲಿ ಸಮಸ್ಯೆಯಿಲ್ಲ. ಈಗಾಗಲೆ 6,077 ಲಸಿಕೆ ಹಾಕಲಾಗಿದೆ. ಜತೆಗೆ ಅರಣ್ಯ ಇಲಾಖೆ ವತಿಯಿಂದ ಹೆಚ್ಚುವರಿಯಾಗಿ 2000 ಲಸಿಕೆ ನೀಡಿದ್ದಾರೆ.
  • ಚಾಮರಾಜನಗರದಲ್ಲಿ ಲಸಿಕೆ ಕೊರತೆಯನ್ನು ನೀಗಿಸುವ ಸಲುವಾಗಿ ಅರಣ್ಯ ಇಲಾಖೆ ಸಹಕಾರ ಪಡೆಯಲಾಗಿದೆ.
  • ಧಾರವಾಡದಲ್ಲಿ ಚಿಕಿತ್ಸೆಗಾಗಿ ಔಷಧ ದಾಸ್ತಾನು ಇದೆ.
  • ಹಾವೇರಿ ಜಿಲ್ಲೆಯಲ್ಲಿ ರೋಗ ಕಾಣಿಸಿಕೊಂಡಿಲ್ಲ. ಆದರೆ, ಹಾಸನ, ಮಂಡ್ಯ ಭಾಗದಿಂದ ಖರೀದಿಸಿ ತಂದ ಎತ್ತು ಹಾಗೂ ಆಕಳುಗಳಲ್ಲಿ ರೋಗ ಕಾಣಿಸಿಕೊಂಡಿದೆ.
  • ಗದಗ ಜಿಲ್ಲೆಯಲ್ಲಿ ಜಾನುವಾರುಗಳು ತೊಂದರೆ ಅನುಭವಿಸುತ್ತಿದ್ದು, ವೈದ್ಯರು ಸ್ಥಳೀಯ ಅನುದಾನ ಬಳಸಿಕೊಂಡು ಲಸಿಕೆ ಹಾಕುತ್ತಿದ್ದಾರೆ.
  • ಬೀದರ್, ಯಾದಗಿರಿ ಜಿಲ್ಲೆಯಲ್ಲಿ ರೋಗ ಬಂದಿಲ್ಲ. ಆದರೆ ಇದುವರೆಗೆ ಜಿಲ್ಲೆಗೆ ಲಸಿಕೆ ಪೂರೈಕೆಯಾಗಿಲ್ಲ.
  • ಕಲಬುರಗಿ ಜಿಲ್ಲೆಯಲ್ಲಿ ಸುಮಾರು 10 ಲಕ್ಷ ಜಾನುವಾರುಗಳಿವೆ. ಈಗಾಗಲೆ ಪಿಪಿಆರ್ ಮತ್ತು ಕರಳು ಬೇನೆ ಲಸಿಕೆಯನ್ನು ಕುರಿ, ಹಸು, ಎಮ್ಮೆಗಳಿಗೆ ನೀಡಲಾಗಿದೆ.
  • ಬೆಳಗಾವಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಲಸಿಕೆ ಸಂಗ್ರಹವಿಲ್ಲ. ಜಿಲ್ಲೆಗೆ 12.5 ಲಕ್ಷ ಲಸಿಕೆಗೆ ಬೇಡಿಕೆ ಇದೆ.
  • ಚಿತ್ರದುರ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ಈಗಾಗಲೆ ರೋಗ ಕಾಣಿಸಿಕೊಂಡಿದ್ದು, ಜಿಲ್ಲೆಯ 20 ಕ್ಕೂ ಹೆಚ್ಚು ಊರುಗಳ 180 ಕ್ಕೂ ಹೆಚ್ಚಿನ ರಾಸುಗಳು ಜ್ವರದಿಂದ ಬಳಲಿವೆ.
  • ದಾವಣಗೆರೆಯಲ್ಲಿ ರೋಗವು ಜುಲೈನಿಂದ ಆರಂಭವಾಗಿ, ಇದುವರೆಗೆ ನೂರಾರು ಜಾನುವಾರುಗಳ ಆರೋಗ್ಯವನ್ನು ಹಿಂಡಿ ಹಿಪ್ಪೆ ಮಾಡಿದೆ. ಇಲಾಖೆ ಲಸಿಕೀಕರಣದ ಬಳಿಕ ಪರಿಸ್ಥಿತಿ ಹತೋಟಿಗೆ ಬರುತ್ತಿದೆ.
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ ಕಾಲುಬಾಯಿ ಜ್ವರ ವಿಪರೀತ ಇತ್ತು. ಕಳೆದ ಒಂದು ವರ್ಷದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿದ್ದು ಲಸಿಕೆಗಾಗಿ ರೈತರು ಕಾಯುತ್ತಿದ್ದಾರೆ.
  • ಉಡುಪಿ ಜಿಲ್ಲೆಯ ಕೆಲವೆಡೆ ರೋಗ ಲಕ್ಷಣ ಕಾಣಿಸಿಕೊಂಡಿದೆ. ಇಲಾಖೆ ಕೂಡಲೇ ಎಚ್ಚೆತ್ತು 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಕಾಲು ಬಾಯಿರೋಗದ ಲಸಿಕೆ ನೀಡಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಲಸಿಕೆ ಕೊರತೆ ಇಲ್ಲ.
  • ಹಾಸನ ಜಿಲ್ಲೆಯಲ್ಲಿ ಜಾನುವಾರುಗಳು ತೀವ್ರ ಕಾಲುಬಾಯಿ ಜ್ವರದಿಂದ ಬಳಲುತ್ತಿವೆ. 35 ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ರಾಸುಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಸೋಂಕಿತ ಜಾನುವಾರುಗಳ ಪ್ರಮಾಣ ಹೆಚ್ಚುವ ಭೀತಿ ಎದುರಾಗಿದೆ.
  • ಮಂಡ್ಯ ಜಿಲ್ಲೆಯಲ್ಲಿ ಈಗಾಗಲೆ ಕಾಲುಬಾಯಿ ರೋಗದ ಅಬ್ಬರಿಸಿ ಸದ್ಯ ಕಡಿಮೆಯಾಗಿದೆ. ವಾರದಿಂದ ಹೊಸ ಪ್ರಕರಣ ಪತ್ತೆಯಾಗಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ರಾಸುಗಳಿಗೆ ರೋಗ ಕಂಡುಬಂದಿದ್ದು, ಈ ಪೈಕಿ 12 ರಾಸುಗಳು ಮೃತಪಟ್ಟಿವೆ.
  • ಮೈಸೂರು ಜಿಲ್ಲೆಯ ಹಲವಾರು ಭಾಗಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ.
  • ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಯಲ್ಲಿ ಎತ್ತು ಹಾಗೂ ಕುರಿಗಳಿಗೆ ಕಾಲುಬಾಯಿ ರೋಗ ಹೆಚ್ಚಾಗಿ ಕಾಣಿಸಿದೆ. ಕಳೆದ ಜೂನ್​ನಲ್ಲಿ ಕಾಲುಬಾಯಿ ರೋಗಕ್ಕೆ ಇಲಾಖೆಯಿಂದ ತಾಲೂಕುವಾರು ಔಷಧ ಪೂರೈಕೆ ಮಾಡಲಾಗಿತ್ತು. ಒಂದು ಸುತ್ತಿನ ಔಷಧ ನೀಡಿದ್ದರಿಂದ ರೋಗ ಹತೋಟಿಗೆ ಬಂದಿತ್ತು. ನಿರಂತರ ಮಳೆ ಹಾಗೂ ತಂಪಾದ ವಾತಾವರಣದಿಂದಾಗಿ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಮತ್ತೊಮ್ಮೆ ಕಾಣಿಸಿದೆ.
  • ರಾಯಚೂರು ಜಿಲ್ಲೆಯಲ್ಲಿ ಲಸಿಕೆಯ ಕೊರತೆಯಿಲ್ಲ. ಜಿಲ್ಲೆಯಲ್ಲಿ ಇದುವರೆಗೂ 14,322 ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆಯನ್ನು ಹಾಕಲಾಗಿದೆ. 2,743 ಕೋಳಿಗಳಿಗೆ ಕೊಕ್ಕರೆ ರೋಗಕ್ಕೆ ಲಸಿಕೆಯನ್ನು ಹಾಕಲಾಗಿದೆ.
  • ಕೊಪ್ಪಳ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಕಾಲುಬಾಯಿ ರೋಗ ಬಾಧಿಸುತ್ತಿದೆ. ರೋಗ ತೀವ್ರವಿರುವೆಡೆ ಬೇರೆಡೆಯಿಂದ ಲಸಿಕೆ ತರಿಸಿ ಹಾಕಿ ನಿಯಂತ್ರಿಸುವ ಕೆಲಸ ನಡೆದಿದೆ. ಸದ್ಯ ತಕ್ಕಮಟ್ಟಿಗೆ ರೋಗ ನಿಯಂತ್ರಣವಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಾಲುಬಾಯಿ ವೈರಸ್ ಸೋಂಕು ಕಂಡು ಬಂದಿದೆ. ಅಂತಹ ಪ್ರದೇಶದ ಸುತ್ತಮುತ್ತಲೂ ಪಶು ಸಂಗೋಪನಾ ಇಲಾಖೆ ವತಿಯಿಂದಲೇ ಲಸಿಕೆ ಖರೀದಿಸಿ ನೀಡಲಾಗುತ್ತಿದೆ.
  • ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಲಸಿಕೆ ನೀಡಲಾಗುತ್ತಿದೆ.
  • ರಾಮನಗರದಲ್ಲಿ ರೋಗ ವ್ಯಾಪಕವಾಗಿದ್ದು, ರೋಗ ನಿಯಂತ್ರಣಕ್ಕೆ ಪಶು ವೈದ್ಯಕೀಯ ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ರಾಸುಗಳು ಮೃತಪಟ್ಟಿದ್ದು, ಇಲಾಖೆ ನಿಖರ ಮಾಹಿತಿ ನೀಡುತ್ತಿಲ್ಲ.
  • ಕೋಲಾರದಲ್ಲಿ ಕೆಲವರು ಖಾಸಗಿಯಾಗಿ 600ರಿಂದ 800 ರೂ. ತೆತ್ತು ಜಾನುವಾರುಗಳಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ಜಾನುವಾರುಗಳಿಗೆ ಪಶುಪಾಲನಾ ಇಲಾಖೆ ಅಲೋಪಥಿ, ಹೋಮಿಯೋಪಥಿ ಔಷಧ ನೀಡಿ, ರೋಗ ನಿಯಂತ್ರಣದಲ್ಲಿ ಇಟ್ಟಿದೆ.
  • ಚಿಕ್ಕಬಳ್ಳಾಪುರದಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಪ್ರದೇಶದ ವ್ಯಾಪ್ತಿಯಲ್ಲಿ ನಿಗಾವಹಿಸಲು, ಇತರ ಭಾಗಗಳಿಗೆ ಹರಡದಿರುವಂತೆ ಲಸಿಕೆ ಹಾಕಿಸಲು ಇಲಾಖೆ ಸೂಚಿಸಿದೆ. ಇತ್ತೀಚೆಗೆ ಜಿಲ್ಲೆಯ ನಂದಿ, ಮಂಚೇನಹಳ್ಳಿ ಸೇರಿ ವಿವಿಧ ಭಾಗದಲ್ಲಿ 5 ಗಳು ಮೃತಪಟ್ಟಿದ್ದು, ವೈದ್ಯರು ರೋಗ ಲಕ್ಷಣವನ್ನು ಅಲ್ಲಗಳೆದಿದ್ದಾರೆ.
  • ಉತ್ತರ ಕನ್ನಡ ಜಿಲ್ಲೆಯ ಅನೇಕ ಭಾಗದಲ್ಲಿ ರೋಗ ಕಾಣಿಸಿಕೊಂಡಿದ್ದು, ರೋಗ ಕಾಣಿಸಿದ ಗ್ರಾಮದ 5 ಕಿಮೀ ವ್ಯಾಪ್ತಿಯ ಜಾನುವಾರುಗಳಿಗೆ ಸುಮಾರು 8 ಸಾವಿರ ಡೋಸ್ ಲಸಿಕೆ ಹಾಕಲಾಗಿದೆ. ಈಗ ರೋಗ ನಿಯಂತ್ರಣದಲ್ಲಿದೆ.
  • ತುಮಕೂರು ಜಿಲ್ಲೆಯಲ್ಲಿ ನೂರಾರು ಜಾನುವಾರುಗಳ ಸಾವುಗಳಾಗಿವೆ. ಲಸಿಕೆ ಹಾಗೂ ಸಿಬ್ಬಂದಿ ಕೊರತೆಯಿಂದ ಸಾಮೂಹಿಕ ಲಸಿಕೆ ಕಾರ್ಯಕ್ರಮ ಹಿಂದುಳಿದಿದೆ. ಈ ವಾರ ಲಸಿಕೆ ಬಂದಿದ್ದು ಎಲ್ಲೆಡೆ ಲಸಿಕೆ ಹಾಕಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net