

| ನವೀನ್ ಬಿಲ್ಗುಣಿ ಶಿವಮೊಗ್ಗ
ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯ ಸೇವಾ ರಸ್ತೆ ಮತ್ತು ಪರಿವೀಕ್ಷಣಾ ರಸ್ತೆಗಳ ಕಾಲುವೆ ಇಕ್ಕೆಲದಲ್ಲಿ ಉತ್ತಿಷ್ಠ ಭಾರತ ಮತ್ತು ಮಲೆನಾಡು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ ನೈಸರ್ಗಿಕ ಕಾಡು ಬೆಳೆಸುವ ಮೂಲಕ ರಾಜ್ಯದಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿವೆ.
ಶಿವಮೊಗ್ಗ ಹೊರವಲಯದ ಮತ್ತೋಡಿನಿಂದ ರಾಮಿನಕೊಪ್ಪದವರೆಗಿನ ತುಂಗಾ ಕಾಲುವೆಯ ಎರಡು ಬದಿ ತಲಾ 15 ಕಿ.ಮೀ. ವ್ಯಾಪ್ತಿಯ ಸುಮಾರು 200 ಎಕರೆ ಪ್ರದೇಶದಲ್ಲಿ 60 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲು ಉದ್ದೇಶಿಸಿದ್ದು, ಕರ್ನಾಟಕ ನೀರಾವರಿ ನಿಗಮ ಮತ್ತು ಅರಣ್ಯ ಇಲಾಖೆ ಅನುಮತಿ ನೀಡಿವೆ.
ಅಳಿವಿನಂಚಿನ ಗಿಡ ನೆಡಲು ಸಿದ್ಧತೆ: ಮುಂದಿನ ಐದು ವರ್ಷದಲ್ಲಿ 60 ಸಾವಿರ ಸಸಿಗಳನ್ನು ನೆಡಲು ಸಂಘ ಸಂಸ್ಥೆಗಳು ಯೋಜನೆ ಮಾಡಿವೆ. ಅದರಲ್ಲೂ ಪಶ್ಚಿಮಘಟ್ಟದ ಅಳಿವಿನ ಅಂಚಿನಲ್ಲಿರುವ ಸಂಪಿಗೆ, ರಾಮಪತ್ರೆ, ಬಲಿಗಿ, ಧೋಮಾ, ಧೂಪ, ಸಾಲಧೂಪ ಸೇರಿ ಹಲವು ಜಾತಿಯ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ ರೂಪಿಸಲಾಗಿದೆ. ಪ್ರಸಕ್ತ ವರ್ಷವೇ ಶಿವಮೊಗ್ಗ ಹೊರವಲಯದ ಮತ್ತೋಡು ಗ್ರಾಪಂ ವ್ಯಾಪ್ತಿಯ ನಾಲ್ಕು ಎಕರೆ ಪ್ರದೇಶದಲ್ಲಿ ಶೀಘ್ರದಲ್ಲೇ ಕಾಡು ಬೆಳೆಸುವ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಒಂದು ಎಕರೆ ಪ್ರದೇಶದಲ್ಲಿ ಗಿಡ ನೆಟ್ಟು ನೀರಾವರಿ ಸೌಲಭ್ಯ, ನಿರ್ವಹಣೆ, ಬೇಲಿ ನಿರ್ವಣಕ್ಕೆ ಕನಿಷ್ಠ ಒಂದೂವರೆ ಲಕ್ಷ ರೂ. ವೆಚ್ಚವಾಗಲಿದೆ. ಕೆಲ ಪರಿಸರಾಸಕ್ತರು ಸಹಾಯಸ್ತ ನೀಡಲು ಮುಂದೆ ಬಂದಿದ್ದು ನೈಸರ್ಗಿಕ ಕಾಡು ಬೆಳೆಸುವ ಯೋಜನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ತುಂಗಾ ಮೇಲ್ದಂಡೆ ಯೋಜನೆ ಮತ್ತು ಅರಣ್ಯ ಇಲಾಖೆ ಅನುಮತಿ ನೀಡಿರುವುದರಿಂದ ಹಂತ ಹಂತವಾಗಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ವಿವಿಧ ಜಾತಿಯ ಗಿಡಗಳನ್ನು ಗುರುತಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಸರ್ವೆ ನಡೆಸಲಿದ್ದು, ಎಷ್ಟು ವಿಸ್ತೀರ್ಣದಲ್ಲಿ ಗಿಡ-ಮರಗಳನ್ನು ಬೆಳೆಸಬಹುದು. ಬೇಸಿಗೆಯಲ್ಲಿ ಅವುಗಳಿಗೆ ನೀರಿನ ವ್ಯವಸ್ಥೆ, ನೆಲ ಸಮತಟ್ಟು ಮಾಡುವುದು, ಜನ ಮತ್ತು ಜಾನುವಾರುಗಳಿಂದ ರಕ್ಷಣೆ ಮಾಡುವುದು ಹೇಗೆ ಎಂಬುದಕ್ಕೂ ಯೋಜನೆ ರೂಪಿಸಲಾಗುತ್ತಿದೆ.
ತುಂಗಾ ಮೇಲ್ದಂಡೆ ಚಾನಲ್ ಹಲವು ಕಡೆ ಒತ್ತುವರಿಯಾಗಿದೆ. ಅಲ್ಲದೆ, ಚರಂಡಿ ನೀರು ನೇರವಾಗಿ ಚಾನಲ್ಗೆ ಸೇರುತ್ತಿದೆ. ಒತ್ತುವರಿ ಆಗುವುದು ಮತ್ತು ಕೊಳಚೆ ನೀರು ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಗಿಡ ನೆಡುವ ಮೂಲಕ ನೈಸರ್ಗಿಕ ಪ್ರಕೃತಿ ನಿರ್ವಣಕ್ಕೆ ಒತ್ತು ನೀಡಲಾಗಿದೆ ಎನ್ನುತ್ತಾರೆ ಯೋಜನೆಯ ಪರಿಸರಾಸಕ್ತರು.
ಸರ್ಕಾರಿ ಸ್ವತ್ತು ಉಳಿಸುವುದು, ಒತ್ತುವರಿ ತಪ್ಪಿಸುವುದು, ಕಾಡು ಬೆಳೆಸುವುದು ಮುಖ್ಯ ಉದ್ದೇಶವಾಗಿದ್ದು ಈ ನಡುವೆ ಜಪಾನ್ ಮಾದರಿಯಲ್ಲಿ ಪ್ರತಿ ಮೂರು ಕಿ.ಮೀ.ಗೊಂದು ಮಿಯಾವಾಚಿ ಫಾರೆಸ್ಟ್ (ಹತ್ತಿರ ಹತ್ತಿರ ಗಿಡ ನೆಟ್ಟು ಬೆಳೆಸುವುದು) ಬೆಳೆಸುವ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ತುಂಗಾ ಕಾಲುವೆ ಇಕ್ಕೆಲದಲ್ಲಿ ಗಿಡ ಬೆಳೆಸಲು ಅರಣ್ಯ ಇಲಾಖೆ ಮತ್ತು ಯುಟಿಪಿ ಅನುಮತಿ ಸಿಕ್ಕಿದೆ. ಇದು ರಾಜ್ಯದಲ್ಲೇ ವಿನೂತನ ಪ್ರಯತ್ನವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸರ್ಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.| ನವ್ಯಶ್ರೀ ನಾಗೇಶ್ ಶಿವಮೊಗ್ಗದ ಪರಿಸರಾಸಕ್ತರುಸರ್ಕಾರಿ ಭೂಮಿ ಅತಿಕ್ರಮಣ ತಡೆಯುವ ಉದ್ದೇಶದಿಂದ ಸರ್ಕಾರ ಈ ಹಿಂದೆಯೇ ಅರಣ್ಯೀಕರಣ ಮಾಡುವ ಯೋಜನೆ ರೂಪಿಸಿತ್ತು. ಅದರಂತೆ ಇದೀಗ ತುಂಗಾ ಕೆನಲ್ ಪಕ್ಕದ ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆ ಇದ್ದು, ಅದಕ್ಕೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.| ಜಿ.ಎಂ.ಪ್ರವೀಣ್ ಕರ್ನಾಟಕ ನೀರಾವರಿ ನಿಗಮದ ಎಇಇ