Bomb Threats: 20ಕ್ಕೂ ಹೆಚ್ಚು ವಿಮಾನ ಸ್ಫೋಟಿಸುವ ಬೆದರಿಕೆ: ಜೈಪುರದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಲ್ಯಾಂಡಿಂಗ್

flaight
Published on

ನವದೆಹಲಿ: ದೇಶದಲ್ಲಿ ವಿಮಾನಗಳನ್ನು ಸ್ಫೋಟಿಸುವ ಬೆದರಿಕೆ ಪ್ರವೃತ್ತಿ ಮುಂದುವರೆದಿದೆ. ಶನಿವಾರ ಭಾರತೀಯ ವಿಮಾನಯಾನ ಸಂಸ್ಥೆಗಳ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ(Bomb Threats) ಬಂದಿದೆ.

ಕಳೆದ ಕೆಲವು ದಿನಗಳಿಂದ ಬರುತ್ತಿರುವ ನಿರಂತರ ಬೆದರಿಕೆಗಳು ಭದ್ರತಾ ಏಜೆನ್ಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿವೆ. ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಮಾಹಿತಿ ಪ್ರಕಾರ, ಏರ್ ಇಂಡಿಯಾ, ಇಂಡಿಗೋ, ಆಕಾಶ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ಏರ್ ವಿಮಾನಗಳಿಗೆ ಬೆದರಿಕೆ ಬಂದಿದೆ. ಇವುಗಳಲ್ಲಿ ಕೆಲವು ವಿಮಾನಗಳು ತುರ್ತು ಭೂಸ್ಪರ್ಶವನ್ನೂ ಮಾಡಬೇಕಾಗಿ ಬಂದಿದೆ.

ಬೆದರಿಕೆಗೆ ಒಳಗಾದ ವಿಮಾನಗಳಲ್ಲಿ ದೆಹಲಿ ಮತ್ತು ಮುಂಬೈನಿಂದ ಇಸ್ತಾಂಬುಲ್‌ಗೆ ಇಂಡಿಗೋದ ವಿಮಾನಗಳು, ಜೋಧ್‌ಪುರದಿಂದ ದೆಹಲಿಗೆ ಮತ್ತು ಉದಯಪುರದಿಂದ ಮುಂಬೈಗೆ ತೆರಳುವ ವಿಮಾನಗಳು ಸೇರಿವೆ.

ಇನ್ನು ದುಬೈ-ಜೈಪುರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಶನಿವಾರ ಮುಂಜಾನೆ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಆದರೆ, ತನಿಖೆ ನಡೆಸಿದಾಗ ಬಾಂಬ್ ಬೆದರಿಕೆ ಹುಸಿಯಾಗಿದೆ ಎಂದು ತಿಳಿದುಬಂದಿದೆ.

ಈ ವಿಮಾನದಲ್ಲಿ ಒಟ್ಟು 189 ಪ್ರಯಾಣಿಕರಿದ್ದರು. ಮತ್ತೊಂದೆಡೆ ದೆಹಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರ ನಂತರ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಯಿತು. ಕಡ್ಡಾಯ ಭದ್ರತಾ ತಪಾಸಣೆಯ ನಂತರ ವಿಮಾನವನ್ನು ಲಂಡನ್‌ಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ 45ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಆದರೆ, ತನಿಖೆ ನಡೆಸಿದಾಗ ಇವೆಲ್ಲವೂ ನಕಲಿ ಎಂಬುದು ಬೆಳಕಿಗೆ ಬಂದಿದೆ. ಈ ಬೆದರಿಕೆಗಳಿಂದ ವಿಮಾನವನ್ನು ಬೇರೆಡೆಗೆ ತಿರುಗಿಸಬೇಕು ಅಥವಾ ರದ್ದುಗೊಳಿಸಬೇಕು. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net