ಕಲಿಕೆ ಸರಿದೂಗಿಸಲು ‘ಸೇತುಬಂಧ’ ಕಾರ್ಯಕ್ರಮ: ಶಿಕ್ಷಕರು ಏನೆಲ್ಲ ತಯಾರಿ ಮಾಡಬೇಕು

sethubanda programme
Published on

ಬೆಂಗಳೂರು ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಶಾಲಾರಂಭದ ಮೊದಲ 30 ದಿನ 1ರಿಂದ 3ನೇ ತರಗತಿಗೆ ಹಾಗೂ ಮೊದಲ 15 ದಿನ 4ರಿಂದ 10ನೇ ತರಗತಿಗೆ ಸೇತುಬಂಧ ಶಿಕ್ಷಣ ನೀಡುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಈ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಸುತ್ತೋಲೆ ಹೊರಡಿಸಿದೆ. ತರಗತಿವಾರು ಮತ್ತು ವಿಷಯವಾರು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಕನ್ನಡ, ತಮಿಳು, ಉರ್ದು, ಮರಾಠಿ ಮತ್ತು ತೆಲುಗಿಗೆ ಸಂಬಂಧಿಸಿದ ಕಲಿಕಾ ಸಾಮಾಗ್ರಿಗಳನ್ನು ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇವುಗಳನ್ನು ಬಳಸಿಕೊಂಡು ಸೇತುಬಂಧ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಡಿಎಸ್‌ಇಆರ್‌ಟಿ ನಿರ್ದೇಶಕರು ತಿಳಿಸಿದ್ದಾರೆ.

ಕಾರ್ಯತಂತ್ರಗಳು:

2024-25ನೇ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿ ತರಗತಿಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ವಿದ್ಯಾ ಪ್ರವೇಶ ಹಾಗೂ ಸೇತುಬಂಧ ಚಟುವಟಿಕೆಗಳನ್ನು ಸಿದ್ಧಪಡಿಸಿ ನೂತನ ಅಭ್ಯಾಸ ಸಹಿತ ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಲಾಗಿದೆ.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ‘ಮರು ಸಿಂಚನ’ ಕಾರ್ಯಕ್ರಮದಡಿ ಸಿದ್ಧಪಡಿಸಿರುವ ವಿದ್ಯಾರ್ಥಿ ಕೈಪಿಡಿಗಳನ್ನು ನೀಡಲಾಗಿದ್ದು, ಈ ಸಾಹಿತ್ಯದ ಬುನಾದಿ ಹಂತದ ಚಟುವಟಿಕೆಗಳನ್ನು ಬಳಸಿಕೊಳ್ಳಬೇಕು.

ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ ಕಲಿಕೆಯನ್ನು ಅನುಕೂಲಗೊಳಿಸಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಅತ್ಯವಶ್ಯಕವಾಗಿದೆ.

ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಪೂರ್ವ ಪರೀಕ್ಷೆ ಹಾಗೂ ಸಾಲ್ಯ ಪರೀಕ್ಷೆಗಳನ್ನು ನಡೆಸಲು ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು, ತಮ್ಮ ಹಂತದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಮೌಲ್ಯಮಾಪನ ಕೈಗೊಳ್ಳುವುದು ಮತ್ತು ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಲಗಳ ಕಲಿಕೆಯಾಗಿದೆ ಎಂಬುದನ್ನು ದಾಖಲಿಸಬೇಕು.

ವಿದ್ಯಾರ್ಥಿಗಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು. ಕಲಿಕೆಯನ್ನು ಆಧರಿಸಿ ರಸಪ್ರಶ್ನೆ ಲಿಖಿತ ಅಥವಾ ಮೌಖಿಕ ಪ್ರೋಶ್ನೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು ಹಾಗೂ ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿ ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net