ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗೆ ಶ್ರಮಿಸಿ; ಕೈ ಕಾರ್ಯಕರ್ತರ ಸಭೆಯಲ್ಲಿ ಕೆ.ಎಚ್​.ಮುನಿಯಪ್ಪ ಅಭಿಮತ

ಕೋಲಾರ ನಗರದ ಕಾಂಗ್ರೆಸ್​ ಕಚೇರಿ ಮುಂಭಾಗ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿದರು. ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​, ಕುಡಾ ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್​ ಇದ್ದರು.
ಕೋಲಾರ ನಗರದ ಕಾಂಗ್ರೆಸ್​ ಕಚೇರಿ ಮುಂಭಾಗ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿದರು. ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​, ಕುಡಾ ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್​ ಇದ್ದರು.
Published on

 ಕೋಲಾರ: ರೈಲು ಮತ್ತು ವಿಮಾನ ಸಾರಿಗೆಯನ್ನು ಮಾರಾಟಕ್ಕೆ ಇಟ್ಟಿರುವುದೇ ಬಿಜೆಪಿಯವರ ಎಂಟು ವರ್ಷಗಳ ಸಾಧನೆ. ನನ್ನ ಮುಖ ನೋಡಿ ಮತ ಹಾಕಿ ಎಂಬ ಮಟ್ಟಕ್ಕೆ ರಾಜಕಾರಣ ತಂದಿಟ್ಟಿದ್ದಾರೆ. ರಾಷ್ಟ್ರ ಹಿತಕ್ಕಾಗಿ ಹಾಗೂ ಕೋಮುವಾದಿ ಬಿಜೆಪಿಯನ್ನು ದೂರವಿಡುವುದಕ್ಕಾಗಿ ಕಾಂಗ್ರೆಸ್​ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು.

ನಗರದ ಕಾಂಗ್ರೆಸ್​ ಕಚೇರಿ ಮುಂಭಾಗ ಸೋಮವಾರ ಕಾಂಗ್ರೆಸ್​ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

2019ರ ಚುನಾವಣೆಯ ಕಹಿ ನೆನಪುಗಳನ್ನು ಮರೆತು, ರಾಷ್ಟ್ರ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸೋನಿಯಾಗಾಂಧಿ ಮತ್ತು ರಾಹುಲ್​ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೀಡಿದ್ದಾರೆ. ನನ್ನೆಲ್ಲಾ ನೋವುಗಳನ್ನು ನುಂಗಿಕೊಂಡು ಒಂದಾಗಿ ಹೋಗಲು ಒಪ್ಪಿದ್ದೇನೆ. ಹಳೆಯದನ್ನು ಮರೆತು ಮುಂದೆ ಪಕ್ಷ ಸಂಟನೆ ಮಾಡಿ ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್​ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಮತ್ತೆ ಈ ಎರಡೂ ಜಿಲ್ಲೆಯಲ್ಲಿ ಪಕ್ಷ ಅಧಿಪತ್ಯ ಸಾಧಿಸಬೇಕು ಎಂದರು.

ಮಾಜಿ ಸಭಾಪತಿ ವಿ.ಆರ್​. ಸುದರ್ಶನ್​ ಮಾತನಾಡಿ, ಕೋಲಾರದಿಂದ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಮೂಲೆಗಳಲ್ಲಿ ಸಂಚರಿಸುತ್ತಿದ್ದರೂ ಸರ್ಕಾರ ಬದಲಾವಣೆಯಾಗಬೇಕೆಂದು ಜನ ಹೇಳುತ್ತಿದ್ದಾರೆ. ಜನರೇ ಈ ರೀತಿ ಹೇಳುವಾಗ ಕಾಂಗ್ರೆಸ್​ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿ ಜನರ ಪರ ಧ್ವನಿಯಾಗಬೇಕಿದೆ. ಸೋನಿಯಾಗಾಂಧಿ, ರಾಹುಲ್​ಗಾಂಧಿ ಮಾರ್ಗದರ್ಶನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

2023 ಚುನಾವಣೆ ಮಾಡು ಇಲ್ಲವೇ ಮಡಿ: ದೇಶದ ಎಲ್ಲರ ವಿಶ್ವಾಸ ಗಳಿಸಿ ಮಲ್ಲಿಕಾರ್ಜುನರ್ಖಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಸಂಟನೆ ಮಾಡಲು ಕೆ.ಎಚ್​.ಮುನಿಯಪ್ಪ ಅವರಿಗೆ ಸೋನಿಯಾಗಾಂಧಿ, ರಾಹುಲ್​ಗಾಂಧಿ, ಖರ್ಗೆಗೆ ಅವರು ಜವಾಬ್ದಾರಿ ನೀಡಿದ್ದಾರೆ. ಆದ ಕಾರಣ ರಾಷ್ಟ್ರದ ಹಿತದೃಷ್ಟಿಯಿಂದ 2023 ಚುನಾವಣೆ ಮಾಡು ಇಲ್ಲವೇ ಮಡಿ ಎನ್ನುವ ರೀತಿಯಾಗಿ ಕೆಲಸ ಮಾಡಬೇಕಿದೆ. ಪಶ್ಚಿಮ ಬಂಗಾಲ, ಆಂಧ್ರ, ತಮಿಳುನಾಡು ರೀತಿಯ ಕಾಂಗ್ರೆಸ್​ ಆಗಬಾರದು. ರಾಜ್ಯದ ವೈವಿಧ್ಯತೆ ಉಳಿಯಬೇಕಾದರೆ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ವಿ.ಆರ್​. ಸುದರ್ಶನ್​ ಹೇಳಿದರು.

ಕುಡಾ ಮಾಜಿ ಅಧ್ಯಕ್ಷ ಅತಾವುಲ್ಲಖಾನ್​ ಮಾತನಾಡಿ, ಕೋಲಾರದಲ್ಲಿ 15 ವರ್ಷದಿಂದ ಕಾಂಗ್ರೆಸ್​ ಪಕ್ಷ ಗೆಲ್ಲಲು ಸಾಧ್ಯವಾಗಿಲ್ಲ. ಇಲ್ಲಿ ಭಿನ್ನಾಪ್ರಾಯಗಳನ್ನು ಬಿಡಬೇಕು. ಯಾರೇ ಪಕ್ಷದ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮಿಸಬೇಕು. ಸಿದ್ದರಾಮಯ್ಯ ಬರುವುದಾದರೆ ಸ್ವಾಗತಿಸೋಣ ಎಂದರು.

ಮುಖಂಡರಾದ ಎಲ್​.ಎ.ಮಂಜುನಾಥ್​, ಊರುಬಾಗಿಲು ಶ್ರೀನಿವಾಸ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಪ್ರಸಾದ್​ಬಾಬು, ಉದಯಶಂಕರ್​, ಮುಖಂಡರಾದ ಕೆ. ಜಯದೇವ್​, ಸವಿತಾ ಮಂಜುನಾಥ್​, ನಗರಸಭಾ ಸದಸ್ಯ ಅಂಬರೀಶ್​ ಇದ್ದರು.

ಕೊಟ್ಟ ಭರವಸೆ ಈಡೇರಿಸಿಲ್ಲ: ಮತೀಯ ಗಲಭೆ, ಧರ್ಮಗಳನ್ನು ಒಡೆಯುವ ಮೂಲಕ ಬಿಜೆಪಿಯವರು 8 ವರ್ಷಗಳಿಂದ ದೇಶದಲ್ಲಿ ಆಶಾಂತಿ ಉಂಟು ಮಾಡುತ್ತಿದ್ದಾರೆ. ನಿರುದ್ಯೋಗ ನಿವಾರಿಸುವುದಾಗಿ ಅಧಿಕಾರಕ್ಕೆ ಬಂದು ಇದೀಗ ಕೊಟ್ಟ ಭರವಸೆಗಳನ್ನು ಇದುವರೆಗೂ ಈಡೇರಿಸಲು ಸಾಧ್ಯವಾಗಿಲ್ಲ. ನನ್ನ ಮುಖ ನೋಡಿ ಮತ ಕೊಡಿ ಎಂದು ಕೇಳುವ ಮಟ್ಟಕ್ಕೆ ಪ್ರಧಾನಿ ಬಂದಿದ್ದಾರೆ. ಎಲ್ಲವನ್ನೂ ಖಾಸಗೀಕರಣ ಮಾಡಿದ್ದಾಯಿತು. ಈಗ ರೈಲು ಮತ್ತು ವಿಮಾನ ಸಾರಿಗೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಕೆ.ಎಚ್​.ಮುನಿಯಪ್ಪ ಬಿಜೆಪಿ ವಿರುದ್ಧ ಹರಿಹಾಯ್ದರು.

ಮನಸ್ಸುಗಳನ್ನು ಒಂದುಗೂಡಿಸಲು ಜೋಡೋ ಯಾತ್ರೆ: ರಾಹುಲ್​ಗಾಂಧಿ ಅವರು ರಾಜಕಾರಣಕ್ಕಾಗಿ ಜೋಡೋ ಯಾತ್ರೆ ಆರಂಭಿಸಿಲ್ಲ. ಧರ್ಮಗಳನ್ನು ಮತ್ತು ಮನಸ್ಸುಗಳನ್ನು ಒಂದುಗೂಡಿಸುವ ಹಾಗೂ ರಾಷ್ಟ್ರದ ಒಳಿತಿಗಾಗಿ 3,570 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ. ಈಗಾಗಲೇ 2600 ಕಿ.ಮೀ. ಮುಗಿಸಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಬೆಳಗ್ಗೆ 6ರಿಂದಲೇ ಪಾದಯಾತ್ರೆಗೆ ಜನರು ಕ್ಯೂ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿಯೂ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದರ ಉದ್ದೇಶ ದೇಶದ ಶಾಂತಿಗಾಗಿ ಎಂದು ಕೆ.ಎಚ್​.ಮುನಿಯಪ್ಪ ಹೇಳಿದರು.

ಸ್ಥಳಿಯರಿಗೆ ಪಕ್ಷದ ಟಿಕೆಟ್​ ನೀಡಲಿ: ಕೋಲಾರ ಜಿಲ್ಲೆಯ ಮಟ್ಟಿಗೆ ಹೇಳಬೇಕಾದರೆ ಜಿಲ್ಲೆಯ ಹಿರಿಯ ಮುಖಂಡರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕೆ.ಎಚ್​.ಮುನಿಯಪ್ಪ, ರಮೇಶ್​ಕುಮಾರ್​ ಈ ಇಬ್ಬರೂ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು. ಈ ಇಬ್ಬರು ಎಐಸಿಸಿ ಮಟ್ಟದಲ್ಲಿ ಒಂದಾಗಬೇಕಾದ ಅನಿವಾರ್ಯತೆ ಇದೆ. ಕೋಲಾರದಲ್ಲಿ ಸ್ಥಳಿಯರಿಗೆ ಟಿಕೆಟ್​ ನೀಡಬೇಕು ಎಂಬ ಅಭಿಲಾಷೆ ನನ್ನದು. ಆದರೆ ಸಿದ್ದರಾಮಯ್ಯ ಕರ್ನಾಟಕದ ಆಸ್ತಿ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರು ಬರುವುದರಿಂದ ಜಿಲ್ಲೆ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ. ಇದು ಬಯಲುಸೀಮೆಯಾಗಿರುವುದರಿಂದ ನೀರಾವರಿ ಯೋಜನೆಗಳು ಬರಬೇಕಿದೆ. ಅವರು ಬರುವುದಾದರೂ ಸ್ವಾಗತ, ಅವರು ಬರಲಿಲ್ಲವೆಂದರೆ ಸ್ಥಳಿಯರಿಗೆ ಟಿಕೆಟ್​ ನೀಡಬೇಕು. ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಮಾಯವಾಗಬೇಕಿದೆ. 2004ರಿಂದಲೂ ನಿರಂತರ ಗೊಂದಲಗಳು ಸೃಷ್ಟಿಯಾಗುತ್ತಿವೆ. ಈ ಗೊಂದಲಗಳು ನಿವಾರಣೆಯಾಗಬೇಕು, ಇದರ ಹೊಣೆ ಕೆ.ಎಚ್​.ಮುನಿಯಪ್ಪ ಮತ್ತು ರಮೇಶ್​ಕುಮಾರ್​ ಅವರದಾಗಿದೆ ಎಂದು ವಿ.ಆರ್​.ಸುದರ್ಶನ್​ ಹೇಳಿದರು.

ಕಾಂಗ್ರೆಸ್​ ಗುಂಪುಗಳ ಮಧ್ಯೆ ಹೊಯ್​-ಕೈ ! ಮೌನವಾಗಿ ಕುಳಿತ ಮುನಿಯಪ್ಪ, ಸುದರ್ಶನ್​; ಜಗಳ ಬಗೆಹರಿಸಲು ಪೊಲೀಸರು ಹರಸಾಹಸ

ಕಾಂಗ್ರೆಸ್​ ಕಚೇರಿ ಮುಂಭಾಗ ಕಾಂಗ್ರೆಸ್​ ಪಕ್ಷದ ಎರಡು ಗುಂಪುಗಳ ನಡುವೆ ಕೈ-ಕೈ ಮಿಲಾಯಿಸಿಕೊಂಡರು.

ಕೋಲಾರ: ಡಿಸೆಂಬರ್​ ಮಾಸಾಂತ್ಯಕ್ಕೆ ಬೃಹತ್​ ಕಾಂಗ್ರೆಸ್​ ಕಾರ್ಯಕರ್ತರ ಸಭೆ ಆಯೋಜಿಸುವ ಸಲುವಾಗಿ ಸೋಮವಾರ ಜಿಲ್ಲಾ ಕಾಂಗ್ರೆಸ್​ ಕಚೇರಿ ಮುಂಭಾಗ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಗೊಂದಲ ಸೃಷ್ಟಿಯಾಗಿ ಪರಸ್ಪರ ಕೈ-ಕೈ ಮಿಲಾಯಿಸುವ ಹಂತ ತಲುಪಿತು.

ಸಭೆಯ ಆರಂಭದಲ್ಲಿ ಮಾಜಿ ಸಭಾಪತಿ ವಿ.ಆರ್​. ಸುದರ್ಶನ್​ ಮತ್ತು ಇತರರು ಮಾತನಾಡುವಾಗ ಮೌನವಾಗಿದ್ದ ಸಭೆ, ಕೆ.ಎಚ್​.ಮುನಿಯಪ್ಪ ಮಾತನಾಡುವಾಗ ಗದ್ದಲ ಸೃಷ್ಟಿಯಾಗಿ, ಹೊಯ್​ ಕೈ ಹಂತ ತಲುಪಿ ಗೊಂದಲದಲ್ಲಿ ಮುಕ್ತಾಯಗೊಂಡಿತು.

ಕೆ.ಎಚ್​.ಮುನಿಯಪ್ಪ ಮಾತನಾಡುವ ಸಂದರ್ಭದಲ್ಲಿ ನನ್ನನ್ನು 2019ರ ಚುನಾವಣೆಯಲ್ಲಿ ಸೋಲಿಸಿದವರು ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ತಂದು ಗೆಲ್ಲಿಸುತ್ತೇನೆಂದು ಹೊರಟಿದ್ದಾರೆ. ಹಳಬರನ್ನು ಬಿಟ್ಟು ಸಭೆಗಳನ್ನು ನಡೆಸಿದ್ದಾರೆ. ಇವರಿಗೆ ಈ ಉಸಾಬಾರಿ ಕೊಟ್ಟವರು ಯಾರು?, ಸಿದ್ದರಾಮಯ್ಯ ಕೋಲಾರಕ್ಕೆ ಬರುವ ಮೊದಲು ಪಕ್ಷದಲ್ಲಿರುವ ಗುಂಪುಗಾರಿಕೆ ಸರಿಮಾಡಲು ಸೂಚಿಸಿದ್ದೇನೆ. ಈ ಹಂತದಲ್ಲಿರುವಾಗ ಕಾಂಗ್ರೆಸ್​ ಸೋಲಿಸಲು ಪ್ರಯತ್ನಪಟ್ಟವರು ಸಿದ್ದರಾಮಯ್ಯ ಪರವಾಗಿ ಪ್ರವಾಸ ಮಾಡುವ ಅವಶ್ಯಕತೆ ಇತ್ತೆ?. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಳ್ಳಲಿ, ಕೋಲಾರದ ಉಸಾಬರಿ ಇವರಿಗೆ ಏಕೆ ಎಂದು ಟಬಂಧನ್​ ಗುಂಪನ್ನು ತರಾಟೆಗೆ ತೆಗೆದುಕೊಂಡರು.

ಜೈಕಾರ ತಂದ ಜಗಳ: ಕೋಲಾರದಿಂದ ಸ್ಪರ್ಧಿಸಲು ಆಕಾಂಗಳು ಇದ್ದಾರೆ. ಸಿದ್ದರಾಮಯ್ಯ ಪಕ್ಷದಿಂದ ಅರ್ಜಿ ಪಡೆದಾಗ ಯಾವ ಕ್ಷೇತ್ರವೆಂದು ನಮೂದಿಸಿಲ್ಲ. ನಾನು ಯಾವ ಕ್ಷೇತ್ರವೆಂದು ನಮೂದು ಮಾಡಿಲ್ಲ. ಸಿದ್ದರಾಮಯ್ಯ ಬರದಿದ್ದರೆ ನಾನು ಸ್ಪರ್ಧಿಸುವ ಹಂತದಲ್ಲಿದ್ದೇನೆ ಎಂದಾಗ, ಸಭೆಯ ಮಧ್ಯದಿಂದ ಕಾರ್ಯಕರ್ತನೊಬ್ಬ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಬೇಕು ಎಂದು ಜೋರಾಗಿ ಕೂಗಿದ. ಅದಕ್ಕೆ ಇತರ ಕಾರ್ಯಕರ್ತರೂ ಜೈಕಾರ ಕೂಗಿದರು. ಆ ಸಂದರ್ಭದಲ್ಲಿ ಮತ್ತೊಂದು ಗುಂಪು ಕೆ.ಎಚ್​.ಮುನಿಯಪ್ಪ ಪರವಾಗಿ ಜೈಕಾರ ಕೂಗಿದಾಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ತಳ್ಳಾಡಿಕೊಂಡರು.

ಗುಂಪುಗಳನ್ನು ಸಮಾಧಾನಪಡಿಸಲು ಪೊಲೀಸರು ಮುಂದಾಗಬೇಕಾಯಿತು. ಬಳಿಕ ಕಾರ್ಯಕರ್ತರು ಸಮಾಧಾನಗೊಂಡು ಸಿದ್ದರಾಮಯ್ಯ ಮತ್ತು ಕೆ.ಎಚ್​.ಮುನಿಯಪ್ಪ ಅವರಿಗೆ ಜೈಕಾರ ಕೂಗಿದರು.

ಮೊಟಕುಗೊಳಿಸಿದ ಭಾಷಣ ಮುಂದುವರಿಸಿದ ಕೆ.ಎಚ್​.ಮುನಿಯಪ್ಪ ಹಳೆಯದನ್ನು ಮರೆತು ಎಲ್ಲರೂ ಒಟ್ಟಿಗೆ ಹೋಗೋಣ. ಹೈಕಮಾಂಡ್​ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗೋಣ, ಯಾರಿಗೇ ಟಿಕೆಟ್​ ನೀಡಿದರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.

ಬಳಿಕ ಕೆ.ಎಚ್​.ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ ಇಬ್ಬರು, ಮೂವರು ಗೊಂದಲ ಮಾಡಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇಲ್ಲಿನ ಗುಂಪುಗಾರಿಕೆಯನ್ನು ಸರಿ ಮಾಡಿ ಬನ್ನಿ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ. ಇಷ್ಟು ದಿನ ಆಗಿದ್ದು ಆಯಿತು, ಗುಂಪುಗಾರಿಕೆ ಬೇಡ, ಒಟ್ಟಿಗೆ ಹೋಗೋಣ ಎಂದಿದ್ದೇನೆ. ಗುಂಪುಗಾರಿಕೆ ಮುಂದುವರಿಯಲಿ ಅನ್ನುವುದಾದರೆ ಕಾಂಗ್ರೆಸ್​ಗೆ ಕಷ್ಟದ ದಿನಗಳು ಬರುತ್ತವೆ. ಹೈ ಕಮಾಂಡ್​ ತೀರ್ಮಾನಕ್ಕೆ ನಾನು ಬದ್ಧ. ಸಿದ್ದರಾಮಯ್ಯ ಅದಕ್ಕೆ ಒಪ್ಪಿದ್ದಾರೆ. ಸಿದ್ದರಾಮಯ್ಯ ಬರಲಿಲ್ಲ ಎಂದರೆ ಸ್ಥಳಿಯರಿಗೆ ಅವಕಾಶ ನೀಡಬೇಕು. ಯಾರಿಗೆ ಟಿಕೆಟ್​ ನೀಡಿದರೂ ನಾವು ಒಟ್ಟಾಗಿ ಕೆಲಸ ಮಾಡಬೇಕು. ಯಾರೂ ಏಕ ಪಕ್ಷೀಯವಾಗಿ ಇನ್ನು ಮುಂದೆ ನಡೆದುಕೊಳ್ಳಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net