

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದ್ದು, ಸರ್ಕಾರವನ್ನು ಹಣಿಯಲು ಸಿದ್ಧವಾಗಿರುವ ಪ್ರತಿಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷ ಸಹ ಗುರಾಣಿಯೊಂದಿಗೆ ಸಜ್ಜಾಗಿದೆ.
ರಾಜಕೀಯ ಸ್ಥಿತ್ಯಂತರದ ನಂತರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ ಉತ್ತರಾಧಿಕಾರಿಯಾಗಿದ್ದಾರೆ. ಯಡಿಯೂರಪ್ಪ ಕಾಲದಲ್ಲಿ ಸರ್ಕಾರವನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಬೊಮ್ಮಾಯಿ, ಇದೀಗ ತಮ್ಮ ಸರ್ಕಾರವನ್ನು ಹೇಗೆ ಕಾಪಾಡಿಕೊಳ್ಳಲಿದ್ದಾರೆ ಎಂಬ ರಾಜಕೀಯ ವಲಯದ ಕುತೂಹಲಕ್ಕೆ ಸೋಮವಾರದಿಂದ ಉತ್ತರ ಸಿಗಲಿದೆ. ಯಾವುದೇ ಪಕ್ಷದಲ್ಲಿಯೂ ವಿರೋಧಿಗಳನ್ನೇನು ಹೊಂದಿಲ್ಲದ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಪ್ರತಿಪಕ್ಷಗಳು ಹೇಗೆ ಕಟ್ಟಿ ಹಾಕಲಿವೆ, ಸರ್ಕಾರದ ನಡವಳಿಕೆಗಳನ್ನು ಹೇಗೆ ಬೆತ್ತಲು ಮಾಡಲಿವೆ ಎಂಬ ಆಸಕ್ತಿಯೂ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ.
ಏನೇನು ಚರ್ಚೆ?: ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಸರ್ಕಾರ ಯಾವುದೇ ರೀತಿಯಲ್ಲಿಯೂ ಬೆಲೆ ತಗ್ಗಿಸುವ ಪ್ರಯತ್ನ ಮಾಡಿಲ್ಲ. ಪ್ರತಿಪಕ್ಷಗಳ ಬಳಿಯಲ್ಲಿರುವ ಪ್ರಮುಖ ಅಸ್ತ್ರವೇ ಇದಾಗಿದೆ. ಕರೊನಾದಿಂದ ಸಂಭವಿಸಿರುವ ಸಾವು, ಇನ್ನೂ ಸಿಗದ ಪರಿಹಾರ, ಮೂರನೇ ಅಲೆ ಎದುರಿಸಲು ಆಗದ ಸಿದ್ಧತೆ, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಕುಸಿದು ಬಿದ್ದಿರುವ ಆರ್ಥಿಕ ಸ್ಥಿತಿ, ಜಾತಿಗಣತಿ ವರದಿ ಬಿಡುಗಡೆ, ಕೇಂದ್ರದಿಂದ ಸಿಗದ ನೆರವು, ನೀರಾವರಿ ವಿಚಾರಗಳು, ಪ್ರವಾಹ ಪರಿಸ್ಥಿತಿ, ಮಿತಿಮೀರಿದ ಭ್ರಷ್ಟಾಚಾರ, ದಂಧೆಯಂತಾಗಿರುವ ವರ್ಗಾವಣೆ.. ಹೀಗೆ ಸಾಲು ಸಾಲು ವಿಚಾರಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸಜ್ಜಾಗಿವೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಯೊಂದು ವಿಚಾರದಲ್ಲಿಯೂ ಮುಖ್ಯಮಂತ್ರಿಗೆ ಪತ್ರಗಳನ್ನು ಬರೆಯುತ್ತ ಸರ್ಕಾರದ ವಿರುದ್ಧ ಅವುಗಳನ್ನೇ ಪ್ರಮುಖ ಅಸ್ತ್ರ ಮಾಡಿಕೊಳ್ಳುವ ಮುನ್ಸೂಚನೆಯನ್ನು ಹಿಂದೆಯೇ ನೀಡಿದ್ದಾರೆ. ಒಂದು ರೀತಿಯಲ್ಲಿ ಪತ್ರಗಳನ್ನೇ ಚಾರ್ಜ್ಶೀಟ್ ರೀತಿ ಮಾಡಿಕೊಳ್ಳಲಿದ್ದಾರೆ. ಬಿಜೆಪಿಯಲ್ಲಿನ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯ ಬೆಳವಣಿಗೆಗಳು ಆ ಪಕ್ಷವನ್ನು ಮುಜುಗರಕ್ಕೆ ಗುರಿಯಾಗಿಸಲು ಪ್ರತಿಪಕ್ಷಗಳು ಬಳಸಿಕೊಳ್ಳುವುದು ಖಾತರಿಯಾಗಿದೆ.
ಆಡಳಿತ ಪಕ್ಷವೂ ಸಜ್ಜು: ಪ್ರತಿಪಕ್ಷಗಳ ವಾಗ್ದಾಳಿಗೆ ಅದೇ ರೀತಿಯಲ್ಲಿಯೇ ಉತ್ತರ ನೀಡಲು ಬಿಜೆಪಿ ಸಹ ಸಜ್ಜಾಗಿದೆ. ಬೊಮ್ಮಾಯಿ ಹಿಂದೆ ಸಮರ್ಥನೆ ಮಾಡಿಕೊಳ್ಳುತ್ತಿದ್ದ ರೀತಿಯಲ್ಲಿ ಈಗ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರು ಸಹೋದ್ಯೋಗಿಗಳು ಹಾಗೂ ಶಾಸಕರನ್ನು ಸಿದ್ಧಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಂದು ಸಚಿವರಾಗಿರುವವರನ್ನೇ ಹೆಚ್ಚಾಗಿ ಪ್ರತಿಪಕ್ಷಗಳ ವಿರುದ್ಧ ಗುರಾಣಿಯಂತೆ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಅಧಿವೇಶನದ ವಿಶೇಷ: ಈ ಸಲದ ವಿಧಾನಮಂಡಲ ಮಳೆಗಾಲದ ಅಧಿವೇಶನದಲ್ಲಿ ವಿಧಾನಸಭೆ ವಿಶಿಷ್ಟ ಹಾಗೂ ವಿಶೇಷ ಸಂದರ್ಭಕ್ಕೆ ಸಾಕ್ಷಿ ಆಗಲಿದೆ. ಆಡಳಿತ ಹಾಗೂ ಪ್ರತಿಪಕ್ಷದ ಸಾಲಿನ ಪ್ರಮುಖ ಸ್ಥಾನಗಳಲ್ಲಿ ಒಂದೇ ರಾಜಕೀಯ ಪಡಸಾಲೆಯಿಂದ ಬಂದವರು ಇದ್ದಾರೆ. ಜನತಾ ಪರಿವಾರದ ಕುಡಿಗಳಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹ ಜನತಾ ಪರಿವಾರದಲ್ಲಿಯೇ ಬೆಳೆದು ಬಂದವರು. ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕರಾಗಿ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ.
ಅತ್ಯುತ್ತಮ ಶಾಸಕ: ಇದೇ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುತ್ತದೆ. ಅಧಿವೇಶನದ ಕೊನೆಯ ದಿನ ಲೋಕಸಭಾ ಸ್ಪೀಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹೆಚ್ಚು ಚರ್ಚೆಯಲ್ಲಿದ್ದ, ಅತ್ಯಂತ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಶಾಸಕನಿಗೆ ಪ್ರಶಸ್ತಿ ಸಿಗಲಿದೆ. ಈ ರೀತಿಯಾದರೂ ಶಾಸಕರು ಸದನದಲ್ಲಿ ಸಕ್ರಿಯವಾಗಿರಲಿ ಎಂಬುದು ಇದರ ಉದ್ದೇಶವಾಗಿದೆ.
ಎತ್ತಿನ ಗಾಡಿಯಲ್ಲಿ ಮೆರವಣಿಗೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಶಾಸಕರೊಂದಿಗೆ ತಮ್ಮ ಮನೆಗಳಿಂದ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಯನ್ನು ಈ ಮೂಲಕ ನಡೆಸಲಿದ್ದಾರೆ.
ಅಧಿವೇಶನದಲ್ಲಿ ಕಾಂಗ್ರೆಸ್ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಕರೊನಾ ವಿಷಯ ಪ್ರಸ್ತಾಪಿಸಲಿದ್ದೇವೆ. ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಲಿ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರೆಲ್ಲ ಮೇಕೆದಾಟು ವಿಚಾರದಲ್ಲಿ ಮೊದಲು ಮಾತನಾಡಬೇಕು. | ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷ
ಕೋವಿಡ್, ಖರೀದಿ ಹಗರಣ ಪ್ರಸ್ತಾಪ: ಕೋವಿಡ್, ಖರೀದಿ ಹಗರಣ ಬಗ್ಗೆ ತನಿಖೆಗೆ ಆಗ್ರಹಿಸಿ ಸದನದಲ್ಲಿ ಧರಣಿ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಕೋವಿಡ್ ಸಂದರ್ಭದಲ್ಲಿ ಜೆಡಿಎಸ್ ನೀಡಿದ ಸಲಹೆಗಳನ್ನು ಸರ್ಕಾರ ಪಾಲನೆ ಮಾಡಿದ್ದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉಂಟಾದ ಸಾವು-ನೋವು ಕಡಿಮೆ ಮಾಡಲು ಸಾಧ್ಯವಿತ್ತು. ಆದರೆ, ಆಗ ಪಕ್ಷ ನೀಡಿದ ಸಲಹೆಗಳನ್ನು ನಿರ್ಲಕ್ಷ್ಯ ಮಾಡಿದ ಸರ್ಕಾರ, ಸೌಜನ್ಯಕ್ಕೂ ಸಭೆ ಕರೆದು ಯಾವ ಸಲಹೆಗಳನ್ನು ಕೇಳಲಿಲ್ಲ ಎನ್ನುವ ಅಸಮಾಧಾನ ಜೆಡಿಎಸ್ನಲ್ಲಿದೆ. ಇದೆಲ್ಲವನ್ನೂ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಬಿಜೆಪಿಯ ಏಳು ಬೀಳುಗಳ ನಡುವೆ ಸದನದ ಒಳಗೆ ಮತ್ತು ಹೊರಗೆ ಟೀಕೆ ಟಿಪ್ಪಣಿಗಳನ್ನು ಎದುರಿಸಲು ಯಡಿಯೂರಪ್ಪ ತಮ್ಮದೆ ಆದ ರಾಜಕೀಯ ಪಟ್ಟುಗಳನ್ನು ಬಳಸುತ್ತಿದ್ದರು. ವಿರೋಧ ಪಕ್ಷಗಳ ದಾಳಿ ಎದುರಿಸಲು ಚಕ್ರವ್ಯೂಹ ಸೃಷ್ಟಿ ಮಾಡಿಕೊಂಡು ರಾಜಕೀಯ ಪ್ರಾಬಲ್ಯ ಮೆರೆಯುತ್ತಿದ್ದ ಬಿಎಸ್ವೈ, ಯಾವುದಕ್ಕೂ ಅಂಜುವ ಅಳಕುವ ಜಾಯಮಾನದವರಲ್ಲ. ಇದೆಲ್ಲವೂ ಗೊತ್ತಿದ್ದ ಕಾರಣಕ್ಕೆ ವಿರೋಧ ಪಕ್ಷಗಳು ಒಂದು ಹಂತಕ್ಕೆ ಯಡಿಯೂರಪ್ಪ ಜತೆಗೆ ಕಾದಾಟಕ್ಕೆ ಮುಂದಾಗದೆ ಸಂಘರ್ಷಕ್ಕೆ ತೆರೆ ಎಳೆದುಬಿಡುತ್ತಿದ್ದವು. ಆದರೆ, ರಾಜಕೀಯ ಪರಿಸ್ಥಿತಿ ಬದಲಾಗಿದೆ. ಈಗ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಲ್ಲಿದ್ದು, ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿರುವ ಬೊಮ್ಮಾಯಿ ಯಾವ ರೀತಿಯಲ್ಲಿ ಸದನದಲ್ಲಿ ವಿರೋಧ ಪಕ್ಷಗಳ ದಾಳಿಯನ್ನು ಎದುರಿಸುತ್ತಾರೆ ಎನ್ನುವುದು ಸಹಜವಾಗಿಯೂ ರಾಜಕೀಯ ವಿರೋಧಿಗಳಿಗೂ ಕುತೂಹಲ ಕೆರಳಿಸಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಬಿಎಸ್ವೈಗೆ ಬಲಗೈ ಬಂಟರಂತೆ ಅಧಿವೇಶನದಲ್ಲಿ ಎದ್ದುನಿಲ್ಲುತ್ತಿದ್ದರು. ಇದೀಗ, ಯಡಿಯೂರಪ್ಪ ಅವರೇ ಸೂಚಿಸಿರುವ ಬೊಮ್ಮಾಯಿ ಸಿಎಂ ಆಗಿದ್ದು, ಇವರಿಗೆ ಬಿಎಸ್ವೈ ಯಾವ ರೀತಿ ಸಹಕಾರ ನೀಡಲಿದ್ದಾರೆ ಎನ್ನುವುದೂ ಕುತೂಹಲಕ್ಕೆ ಕಾರಣವಾಗಿದೆ.