

ನವದೆಹಲಿ: ಚೀನಾದ ಆಲಿಬಾಬಾ ಕಂಪನಿ ಮತ್ತು ಅದರ ಸಂಸ್ಥಾಪಕ ಜಾಕ್ ಮಾ ಅವರಿಗೆ ಗುರುಗ್ರಾಮದ ಜಿಲ್ಲಾ ನ್ಯಾಯಾಲಯ ಸಮನ್ಸ್ ಹೊರಡಿಸಿದೆ. ಮಾಜಿ ಉದ್ಯೋಗಿಯೊಬ್ಬ ನೀಡಿದ್ದ ದೂರಿನ ಮೇರೆಗೆ ಈ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 29ರಂದು ಹಾಜರಾಗುವಂತೆ ಸೂಚಿಸಲಾಗಿದೆ.
ಕಂಪನಿ ಮತ್ತು ಅದರ ಅಧಿಕಾರಿಗಳು 30 ದಿನಗಳೊಳಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆಯೂ ಕೋರ್ಟ್ ಆದೇಶಿಸಿದೆ. ಆಲಿಬಾಬಾ ಕಂಪನಿಯ ಆಪ್ಗಳಲ್ಲಿ ಸೆನ್ಸಾರ್ಶಿಪ್ ವಿಧಿಸಲಾಗುತ್ತಿದೆ ಹಾಗೂ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂಬುದನ್ನು ಗಮನಕ್ಕೆ ತಂದ ಉದ್ಯೋಗಿ ಪುಷ್ಪೇಂದ್ರ ಸಿಂಗ್ ಪರ್ವರ್ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಅದನ್ನು ಪ್ರಶ್ನಿಸಿ ಪರ್ವರ್ ಮೊಕದ್ದಮೆ ದಾಖಲಿಸಿದ್ದಾರೆ.
ಭಾರತ-ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಆಲಿಬಾಬಾದ ಯೂಸಿ ನ್ಯೂಸ್, ಯೂಸಿ ಬ್ರೌಸರ್ ಮತ್ತು ಚೀನಾದ ಇತರ 57 ಆಪ್ಗಳನ್ನು ಭಾರತ ನಿಷೇಧಿಸಿದೆ. ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅದಾದ ಕೆಲವು ವಾರಗಳ ನಂತರ ಈ ವಿದ್ಯಮಾನ ನಡೆದಿದೆ.